ಪೊನ್ನಂಪೇಟೆ, ಜ. ೧೭: ಹುದಿಕೇರಿ ಗ್ರಾಮದಲ್ಲಿ ನಿರ್ಮಿಸಿರುವ ಅಮರ್ ಜವಾನ್ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಭಾರತೀಯ ಸೇನಾ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಿವೃತ್ತ ಕರ್ನಲ್ ಮಲ್ಲೆಂಗಡ ಕೆ.ಬೆಳ್ಳಿಯಪ್ಪ ಹಾಗೂ ನಿವೃತ್ತ ವಿಂಗ್ ಕಮಾಂಡರ್ ಬೊಳಿಯಂಗಡ ಯು. ದೇವಯ್ಯ ಅವರುಗಳು ಹೂವಿನ ಕುಂಡಕ್ಕೆ ನೀರೆರೆಯುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ನಿವೃತ್ತ ಕರ್ನಲ್ ಮಲ್ಲೇಂಗಡ ಕೆ.ಬೆಳ್ಳಿಯಪ್ಪ ಅವರು, ಭಾರತೀಯ ಸೇನೆ ಆರಂಭವಾದ ದಿನ ಅತ್ಯಂತ ಶುಭದಿನವಾಗಿದೆ. ಹುದಿಕೇರಿಯ ಮಾಜಿ ಸೈನಿಕರ ಶ್ರಮದಿಂದಾಗಿ ಅತ್ಯಂತ ಸುಂದರವಾಗಿ ಅಮರ್ ಜವಾನ್ ಸ್ಮಾರಕ ನಿರ್ಮಾಣವಾಗಿದೆ. ಕೊಡಗಿನಲ್ಲಿ ಹುಟ್ಟಿದ ನಾವು ಪುಣ್ಯವಂತರು. ಸ್ವಚಂದವಾದ ಪರಿಸರವನ್ನು ನಾವು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕೆಂದು ಕರೆ ನೀಡಿದರು.

ಮತ್ತೋರ್ವ ಅತಿಥಿ ನಿವೃತ್ತ ವಾಯು ಸೇನಾ ವಿಂಗ್ ಕಮಾಂಡರ್ ಬೊಳಿಯಂಗಡ ಯು.ದೇವಯ್ಯ ಅವರು ದಿನದ ಮಹತ್ವದ ಕುರಿತು ಮಾತನಾಡಿ, ವೀರ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಸ್ವತಂತ್ರ ಭಾರತದ ಮೊದಲ ಸೇನಾ ದಂಡನಾಯಕರಾಗಿ ಅಧಿಕಾರ ಸ್ವೀಕರಿಸಿದ ದಿನದ ಸ್ಮರಣಾರ್ಥ ಸೇನಾ ದಿನಾಚರಣೆ ಆಚರಿಸಲಾಗುತ್ತದೆ. ಕಾರ್ಯಪ್ಪ ಅವರ ಆದರ್ಶಗಳು ಇಂದಿನ ಯುವಜನತೆಗೆ ಮಾದರಿಯಾಗಬೇಕು ಎಂದರು.

ಹುದಿಕೇರಿ ಮಾಜಿ ಸೈನಿಕ ಸಂಘದ ಅಧ್ಯಕ್ಷ ಬಲ್ಯಮಿದೇರೀರ ಪ್ರಕಾಶ್ ಅವರು ಮಾತನಾಡಿ, ಐದು ನಾಡಿನ ಮಾಜಿ ಸೈನಿಕರೆಲ್ಲಾ ಸೇರಿ ಕೇವಲ ೪ ತಿಂಗಳಿನಲ್ಲಿ ಅಮರ್ ಜವಾನ್ ಸ್ಮಾರಕ ನಿರ್ಮಿಸಿದ್ದೇವೆ. ಮುಂದಿನ ಜನಾಂಗದ ಮಕ್ಕಳಿಗೆ ತಾವು ಸೇನೆಯಲ್ಲಿ ಸೇರಿ ನಿವೃತ್ತಿ ಹೊಂದಿ ಬಂದ ನಂತರ ಯಾವ ಕಾರ್ಯ ಮಾಡಬೇಕೆಂದು ಉತ್ತೇಜನ ನೀಡುವ ಉದ್ದೇಶದಿಂದ ಮಾಜಿ ಸೈನಿಕರೆಲ್ಲರೂ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಅಲ್ಲದೆ ರಾಷ್ಟಿçÃಯ ದಿನಾಚರಣೆಗಳನ್ನು ಆಚರಿಸಲು ಮಡಿಕೇರಿ ಹಾಗೂ ವೀರಾಜಪೇಟೆಗೆ ಹೋಗಬೇಕಾಗಿತ್ತು. ಈ ಕಾರಣದಿಂದ ಹುದಿಕೇರಿಯಲ್ಲಿಯೇ ಶ್ರಮವಹಿಸಿ ಅಮರ್ ಜವಾನ್ ಯುದ್ಧ ಸ್ಮಾರಕ ನಿರ್ಮಿಸಿದ್ದೇವೆಂದರು.

ಹುದಿಕೇರಿ ಮಾಜಿ ಸೈನಿಕ ಸಂಘದ ಹಿರಿಯ ಸಲಹೆಗಾರ ಮಂಡೇಚAಡ ದಿನೇಶ್ ಚಿಟ್ಟಿಯಪ್ಪ ಅವರು ಮಾತನಾಡಿ, ಹುದಿಕೇರಿಯಲ್ಲಿ ಅತ್ಯಂತ ಸುಂದರವಾದ ಅಮರ್ ಜವಾನ್ ಸ್ಮಾರಕ ನಿರ್ಮಿಸಿದ್ದೇವೆ. ರಾಷ್ಟ್ರೀಯ ದಿನಗಳನ್ನು ಆಚರಿಸಿ ನಮ್ಮ ವೀರ ಯೋಧರು ಹಾಗೂ ಬಲಿದಾನ ನೀಡಿದವರನ್ನು ಸ್ಮರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಈ ಸಂದರ್ಭ ಹುದಿಕೇರಿ ಮಾಜಿ ಸೈನಿಕರ ಸಂಘದ ವತಿಯಿಂದ ನಿವೃತ್ತ ಕರ್ನಲ್ ಮಲ್ಲೆಂಗಡ ಕೆ. ಬೆಳ್ಳಿಯಪ್ಪ ಹಾಗೂ ನಿವೃತ್ತ ವಿಂಗ್ ಕಮಾಂಡರ್ ಬೊಳಿಯಂಗಡ ಯು. ದೇವಯ್ಯ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಹುದಿಕೇರಿ ಮಾಜಿ ಸೈನಿಕ ಸಂಘದ ಉಪಾಧ್ಯಕ್ಷ ಚೆಕ್ಕೇರ ಎಂ. ರಮೇಶ್, ಮಾಜಿ ಸೈನಿಕ ಕಾರ್ಯದರ್ಶಿ ಬೊಜ್ಜಂಗಡ ಎಂ. ತಿಮ್ಮಯ್ಯ, ಸಂಘಟನಾ ಕಾರ್ಯದರ್ಶಿ ಕಿರಿಯಮಾಡ ಎ. ಮಿಲನ್ ಗಣಪತಿ, ಖಜಾಂಚಿ ಬೊಳ್ಳಜೀರ ಪಿ. ಕಿಶೋರ್, ಜಂಟಿ ಕಾರ್ಯದರ್ಶಿ ಬೊಳ್ಳಿಮಾಡ ಪಿ. ಬಿನು ಕುಮಾರ್, ನಿರ್ದೇಶಕ ಮಲ್ಲೆಂಗಡ ಜಯ ಉತ್ತಯ್ಯ, ಹಿರಿಯ ಸಲಹೆಗಾರ ಬಯವಂಡ ಯು.ಕಾಳಪ್ಪ, ನ್ಯಾಕ್ ಕಾರ್ಯದರ್ಶಿ ಮುಲ್ಲೇರ ಪೊನ್ನಮ್ಮ, ಮಾಚಿಮಂಡ ಭವಾನಿ, ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘದ ಉಪಾಧ್ಯಕ್ಷ ಕುಟ್ಟಂಡ ಲವ, ತೀತಿರ ಮೇರಿ ಪೂಣಚ್ಚ, ಹುದಿಕೇರಿ ಪೊಲೀಸ್ ಠಾಣಾ ಎ.ಎಸ್.ಐ ಸುಕುಮಾರ್ ಹಾಗೂ ಮಾಜಿ ಸೈನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.