ಸೋಮವಾರಪೇಟೆ,ಜ.೧೭: ಗ್ರಾಮೀಣ ಭಾಗದಲ್ಲಿ ನಡೆಯುವ ಜಾತ್ರೋತ್ಸವಗಳು ಸಾಮರಸ್ಯದ ಪ್ರತೀಕವಾಗಿವೆ. ಹಬ್ಬಾಚರಣೆಗಳ ಜೊತೆಯಲ್ಲಿ ಕ್ರೀಡೆಯನ್ನೂ ಆಯೋಜಿಸುವ ಮೂಲಕ ಕೊಡಗಿನ ರಕ್ತದಲ್ಲೇ ಕ್ರೀಡೆ ಅಡಗಿದೆ ಎಂಬುದನ್ನು ಕೊಡಗಿನ ಜನ ನಿರೂಪಿಸುತ್ತಿದ್ದಾರೆ ಎಂದು ಸಂಸದ ಯದುವೀರ್ ಒಡೆಯರ್ ಶ್ಲಾಘಿಸಿದರು.

ಸಮೀಪದ ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ದೇವಾಲಯ ಸಮಿತಿ ವತಿಯಿಂದ ಆಯೋಜಿಸಿದ್ದ ರಥೋತ್ಸವ ಕಾರ್ಯಕ್ರಮದಲ್ಲಿ, ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಂತಳ್ಳಿ ಜಾತ್ರೆಗೆ ತನ್ನದೇ ಆದ ಇತಿಹಾಸವಿದೆ. ಅದನ್ನು ಈವರೆಗೂ ಉಳಿಸಿ ಬೆಳೆಸಿಕೊಂಡು ಬಂದಿರುವುದು ಶ್ಲಾಘನೀಯ. ಪದ್ದತಿ ಪರಂಪರೆಗಳು ಸಂಸ್ಕೃತಿಯ ಕೊಂಡಿಗಳಾಗಿದ್ದು, ಇವುಗಳು ಕಳಚದಂತೆ ನೋಡಿಕೊಳ್ಳಬೇಕು ಎಂದರು.

ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕುಮಾರಲಿಂಗೇಶ್ವರ ಯುವಕ ಸಂಘದಿAದ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ. ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕ್ರೀಡಾಕೂಟಗಳು ಹೆಚ್ಚು ನಡೆಯಬೇಕೆಂದು ಅಭಿಪ್ರಾಯಿಸಿದರು.

ಈ ಸಂದರ್ಭ ಮಾಜೀ ಶಾಸಕ ಅಪ್ಪಚ್ಚು ರಂಜನ್, ಮಾಜೀ ಎಂ.ಎಲ್.ಸಿ. ಮೇದಪ್ಪ, ಯುವಕ ಸಂಘದ ಅಧ್ಯಕ್ಷ ಕೃಪೇಶ್, ಪ್ರಮುಖರಾದ ಗಿರೀಶ್ ಮಲ್ಲಪ್ಪ, ಪ್ರೇಮ್ ನಾಥ್, ವಿಜಯ್ ಕುಮಾರ್ ಸೇರಿದಂತೆ ಇತರರು ಇದ್ದರು.

ಕ್ರೀಡೆಯಿಂದ ಆರೋಗ್ಯ ವೃದ್ದಿ-ಮಂತರ್: ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಡಾ. ಮಂತರ್ ಗೌಡ ಅವರು ಕ್ರೀಡಾಪಟುಗಳಿಗೆ ಹಸ್ತಲಾಘವ ಮಾಡಿ ಮಾತನಾಡಿ, ಕ್ರೀಡೆಯಿಂದ ದೈಹಿಕ ಹಾಗು ಮಾನಸಿಕ ಆರೋಗ್ಯ ವೃದ್ದಿಸುತ್ತದೆ. ಕ್ರೀಡಾಪಟುಗಳಿಗೆ ಪ್ರೋತ್ಸಾಹದ ಅಗತ್ಯವಿದೆ. ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಸಂಘ ಸಂಸ್ಥೆಗಳಿAದ ಆಗಬೇಕು ಎಂದು ಅಭಿಪ್ರಾಯಿಸಿದರು.

ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ ಮಾತನಾಡಿ, ಗ್ರಾಮೀಣ ಭಾಗದ ಕ್ರೀಡಾಪಟುಗಳು ಪರಿಶ್ರಮದಿಂದ ಉನ್ನತಮಟ್ಟಕ್ಕೇರಿದರೂ ಅವಕಾಶಗಳ ಕೊರತೆ ಎದುರಿಸಬೇಕಾಗುತ್ತಿದೆ. ಕಬಡ್ಡಿ ಕ್ರೀಡೆಯ ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ಸ್ವಹಿತಾಸಕ್ತಿ ಮೇಲುಗೈ ಸಾಧಿಸುತ್ತಿದ್ದು, ಪ್ರತಿಷ್ಠಿತ ಕ್ರೀಡೆಗಳಿಗೆ ಆಯ್ಕೆ ಸಂದರ್ಭ ತಾರತಮ್ಯ ಆಗುತ್ತಿದೆ. ಈ ವ್ಯವಸ್ಥೆ ಬದಲಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ.ಮಾಜೀ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಪ್ರಮುಖರಾದ ಅರುಣ್ ಕೊತ್ನಳ್ಳಿ, ಬಿ.ಬಿ. ಸತೀಶ್, ಕಬಡ್ಡಿ ತಮ್ಮಣ್ಣಿ, ಶಾಂತಳ್ಳಿ ವಿ.ಎಸ್.ಎಸ್.ಎನ್. ಅಧ್ಯಕ್ಷ ಬಿ.ಈ. ಜಯೇಂದ್ರ, ಪಿ.ಕೆ. ರವಿ ಸೇರಿದಂತೆ ಇತರರು ಇದ್ದರು.

ಪೊಲೀಸ್ ಅಧಿಕಾರಿ ವಿರುದ್ಧ ಅಸಮಾಧಾನ

ಶಾಂತಳ್ಳಿ ಜಾತ್ರೋತ್ಸವ ಸಂದರ್ಭದಲ್ಲಿ ಈ ವ್ಯಾಪ್ತಿಯ ಪೊಲೀಸ್ ಅಧಿಕಾರಿ ಭಕ್ತಾದಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಪ್ರಮುಖರು ಬಹಿರಂಗ ವೇದಿಕೆಯಲ್ಲಿ, ಶಾಸಕರೆದುರೇ ಆಕ್ರೋಶ ವ್ಯಕ್ತಪಡಿಸಿದರು. ಕ್ರೀಡಾಕೂಟ ಆಯೋಜಕರಿಗೆ ದೇವರ ವಿಗ್ರಹ ತರುತ್ತಿದ್ದವರಿಗೆ ಇದು ನೋವಾಗಿದೆ. ಮುಂದಿನ ವರ್ಷದಲ್ಲಿ ಈ ಅಧಿಕಾರಿ ಕ್ರೀಡಾಕೂಟ, ಜಾತ್ರೆಯನ್ನೂ ನಡೆಸಲಿ ಎಂದು ಪ್ರಮುಖರಾದ ಅರುಣ್ ಕೊತ್ನಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಎಂಎಲ್‌ಸಿ ಎಸ್.ಜಿ. ಮೇದಪ್ಪ ಮಾತನಾಡಿ, ಅಧಿಕಾರಿ ಜನಸಾಮಾನ್ಯರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂದು ದೂರಿದರು. ಇದಕ್ಕೆ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ದನಿಗೂಡಿಸಿದರು. ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತನಾಡಿ, ಪೊಲೀಸ್ ಅಧಿಕಾರಿಯೋರ್ವರ ಮೇಲೆ ಆರೋಪಗಳು ಬರುತ್ತಿರುವುದು ಆಶ್ಚರ್ಯ ತರಿಸಿದೆ. ಶಾಸಕರು ಈ ಬಗ್ಗೆ ಗಮನ ಹರಿಸಬೇಕು ಎಂದರು. ಶಾಸಕ ಡಾ. ಮಂತರ್ ಗೌಡ ಅವರು, ಆರೋಪಗಳ ಬಗ್ಗೆ ಮೇಲಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದರು.

ಈ ಬೆಳವಣಿಗೆಗಳ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ, ಸುಗಮ ವಾಹನ ಸಂಚಾರದ ದೃಷ್ಟಿಯಿಂದ ಏರುದನಿಯಲ್ಲಿ ಮಾತನಾಡಿದ್ದೇನಷ್ಟೇ. ಈ ಹಿಂದಿನ ಕೆಲ ಪ್ರಕರಣಗಳಲ್ಲಿ ಕಾನೂನು ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಕ್ಕೆ ಆರೋಪಗಳನ್ನು ಮಾಡುತ್ತಿದ್ದಾರೆ. ತಾನು ಇಲಾಖೆಯ ಕರ್ತವ್ಯವನ್ನಷ್ಟೇ ನಿಭಾಯಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.