ವೀರಾಜಪೇಟೆ, ಜ. ೧೭: ಕ್ರೀಡಾಕೂಟ, ಸಾಂಸ್ಕöÈತಿಕ ಕಾರ್ಯಕ್ರಮಗಳ ಆಯೋಜನೆಯಿಂದ ಯುವ ಸಮಾಜ ಸಂಘಟನೆ ಸಾಧ್ಯ ಎಂದು ಕೊಡಗು ಜಿಲ್ಲಾ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಬಿ.ಆರ್. ಲಿಂಗಪ್ಪ ಹೇಳಿದರು.

ವೀರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಂಘದ ಆಶ್ರಯದಲ್ಲಿ ವೀರಾಜಪೇಟೆಯ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಪುಟ್ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲರನ್ನು ಒಟ್ಟು ಸೇರಿಸುವುದೇ ಕ್ರೀಡಾಕೂಟದ ಉದ್ದೇಶ. ಹಿರಿಯರ ಆದರ್ಶದ ಮೂಲಕ ಸಂಘಟನೆಗೆ ಶಕ್ತಿ ನೀಡುವ ಕೆಲಸವಾಗಬೇಕಾಗಿದೆ ಎಂದು ಹೇಳಿದರು. ವೀರಾಜಪೇಟೆ ಪುರಸಭೆಯ ಮಾಜಿ ಸದಸ್ಯ ಸಿ.ಕೆ. ಪ್ರಥ್ವಿನಾಥ್ ಮಾತನಾಡಿ, ಬಿಲ್ಲವ ಸಂಘದ ಪ್ರಥಮ ಕ್ರೀಡಾಕೂಟ ಇದಾಗಿದ್ದು, ಸಂಘವು ಸಾಮಾಜಿಕ ಸೇವೆಗಳನ್ನು ಸಲ್ಲಿಸುತ್ತಾ ಬರುತ್ತಿದೆ ಎಂದರು. ಬಿಲ್ಲವ ಸೇವಾ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯೆ ಬಿ.ಜಿ. ಅನಿತಾ ಕಾರ್ಯಕ್ರಮಕ್ಕೆ ಶುಭ ಕೋರಿ ಮಾತನಾಡಿದರು.

ವೀರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಬಿ.ಎಂ. ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿಲ್ಲವ ಸೇವಾ ಸಮಾಜದ ವತಿಯಿಂದ ಇದೇ ಮೊದಲ ಬಾರಿಗೆ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಕ್ರೀಡಾಕೂಟಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯವಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಲು ಎಲ್ಲರೂ ಮುಂದೆ ಬರಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಬೇಕಿದೆ. ಸಮುದಾಯದ ಮಕ್ಕಳು ವಿದ್ಯೆಗೆ ಹೆಚ್ಚು ಒತ್ತು ನೀಡಿ ಅದರಲ್ಲಿ ಸಾಧನೆ ಮಾಡಬೇಕು ಎಂದರು. ವೇದಿಕೆಯಲ್ಲಿ ಅತಿಥಿ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಅತಿಥಿಗಳು ಮೈದಾನದಲ್ಲಿ ಆಟಗಾರರನ್ನು ಪರಿಚಯಿಸಿಕೊಂಡು ಶುಭ ಕೋರಿದರು. ಮೈದಾನದಲ್ಲಿ ಬಾಲ್ ಒದೆಯುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬಿಲ್ಲವ ಸೇವಾ ಸಂಘದ ಗೌರವ ಅಧ್ಯಕ್ಷ ಬಿ.ಆರ್. ರಾಜ, ಉಪಾಧ್ಯಕ್ಷ ಪುರುಷೋತ್ತಮ, ಕಾರ್ಯದರ್ಶಿ ಬಿ.ಎಸ್. ಜನಾರ್ಧನ ಹಾಗೂ ಮಾಸ್ರ‍್ಸ್ ಕ್ಲಬ್ ಅಧ್ಯಕ್ಷ ಭಾಸ್ಕರ್ ಎಲ್.ಜಿ., ಪುರಸಭೆ ಮಾಜಿ ಸದಸ್ಯೆ ಸುನಿತಾ ಬಿ.ಡಿ. ಉಪಸ್ಥಿತರಿದ್ದರು.

ತಾಲೂಕು ಬಿಲ್ಲವ ಸೇವಾ ಸಂಘದ ಖಜಾಂಚಿ ಬಿ.ಎಂ. ಸತೀಶ್, ಅಶ್ವಥ್, ಮಹಿಳಾ ಘಟಕದ ಎಲ್ಲಾ ಸದಸ್ಯರುಗಳು, ಸಂಘದ ಪದಾಧಿಕಾರಿಗಳು ಇದ್ದರು.