ಮಡಿಕೇರಿ, ಜ. ೧೮: ಚುನಾವಣೆ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ತಾನು ಭರವಸೆ ನೀಡಿದ್ದು ಅದನ್ನು ಈಡೇರಿಸಲು ಬದ್ಧನಿದ್ದೇನೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ಮಡಿಕೇರಿ ತಾಲೂಕಿನ ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರವನಾಡು ಹಾಗೂ ಮದೆ ಪಂಚಾಯಿತಿ ವ್ಯಾಪ್ತಿಯ ಅವಂದೂರು ಗ್ರಾಮದಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದಾದ್ಯಂತ ರಸ್ತೆಗಳ ಅಭಿವೃದ್ಧಿಗೆ ಮನವಿಗಳ ಮಹಾಪೂರವೇ ಹರಿದು ಬರುತ್ತಿದ್ದು ಆದ್ಯತೆ ಮೇರೆಗೆ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಹಂತ ಹಂತವಾಗಿ ಅನುದಾನ ಒದಗಿಸಲಾಗುವುದು. ಕಾಮಗಾರಿಯ ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಬೆಟ್ಟಗೇರಿ, ಕೇಟೋಳಿ, ಕಾರುಗುಂದ ರಸ್ತೆ, ಕಾಳೇರಮ್ಮನ ಕುಟುಂಬಸ್ಥರ ರಸ್ತೆ, ಕಡ್ಯದ ಕುಟುಂಬಸ್ಥರ ರಸ್ತೆ, ನಿಂಗಪ್ಪನ ಕುಟುಂಬದವರ ಮನೆಗೆ ಹೋಗುವ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಅವರು, ಹೆರವನಾಡು ಮೇದರ ಸಮುದಾಯ ಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ಶಾಸಕರು ತಮ್ಮ ಮನೆಗೆ ಬಂದು ಆತಿಥ್ಯ ಸ್ವೀಕರಿಸಿದ್ದನ್ನು ಕಂಡು ಹರ್ಷಗೊಂಡ ಗ್ರಾಮಸ್ಥರು ಅವರನ್ನು ಸನ್ಮಾನಿಸಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ಬೆಟ್ಟಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಕೊಡಗನ ತೀರ್ಥಪ್ರಸಾದ್, ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಳಿಯಂಡ ಕಮಲಾ ಉತ್ತಯ್ಯ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಹೊಸೂರು ಸೂರಜ್, ಡಿಸಿಸಿ ಸದಸ್ಯರಾದ ಕೇಟೋಳಿರ ಮೋಹನ್ ರಾಜ್, ಪಿ.ಎಲ್. ಸುರೇಶ್ ಸಂಪಾಜೆ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ನಾಪಂಡ ಗಣೇಶ್, ಪ್ರಮುಖರಾದ ಕಾಳೇರಮ್ಮನ ಕುಮಾರ್, ಬಾಳಾಡಿ ಪ್ರತಾಪ್ ಕುಮಾರ್, ಪೂಜಾರಿರ ಪ್ರದೀಪ್ ಕುಮಾರ್, ಪಟ್ಟಡ ದೀಪಕ್, ಮಜೀದ್ ಬೆಟ್ಟಗೇರಿ, ಶಾಹಿದ್ ಬೆಟ್ಟಗೇರಿ, ಕೋಡಿ ಮೋಟಯ್ಯ, ಅರಂಬೂರು ನಾಗೇಶ್, ಹನೀಫ್ ಸಂಪಾಜೆ ಸೇರಿದಂತೆ ಕೇಟೋಳಿ ಕುಟುಂಬಸ್ಥರು, ಕಾಳೇರಮ್ಮನ ಕುಟುಂಬಸ್ಥರು, ಕಡ್ಯದ ಕುಟುಂಬಸ್ಥರು, ನಿಂಗಪ್ಪನ ಕುಟುಂಬಸ್ಥರು, ಮೇದರ ಕಾಲೋನಿ ನಿವಾಸಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.