ಮಡಿಕೇರಿ, ಜ. ೧೯: ಕೊಡಗು ಗೌಡ ಸಮಾಜಕ್ಕೆ ಸರಕಾರದ ವತಿಯಿಂದ ಮಡಿಕೇರಿ ತಾಲೂಕಿನ ಮದೆ ಗ್ರಾಮದಲ್ಲಿ ೩ ಎಕರೆ ಜಮೀನನ್ನು ಮಂಜೂರು ಮಾಡಿಸುವಲ್ಲಿ ಸಹಕರಿಸಿದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರನ್ನು ಕೊಡಗು ಗೌಡ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ಪೊನ್ನಣ್ಣ ಅವರ ಗೃಹಕಚೇರಿಯಲ್ಲಿ ಭೇಟಿಯಾದ ಸಮಾಜದ ಪ್ರಮುಖರು, ಕೊಡಗು ಗೌಡ ಜನಾಂಗದ ಮುಖ್ಯವಾಣಿಯಂತಿರುವ ಗೌಡ ಸಮಾಜದ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ಸರಕಾರದೊಂದಿಗೆ ಮಾತುಕತೆ ನಡೆಸಿ, ೩ ಎಕರೆ ಜಮೀನನ್ನು ಮಂಜೂರು ಮಾಡಿಸಿರುವುದಕ್ಕೆ ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ನಾಡಿನ ಬೆಳವಣಿಗೆಗೆ ಪ್ರತಿಯೊಂದು ಸಮಾಜದ ಕೊಡುಗೆಯು ಬಹು ಮುಖ್ಯವಾಗಿದೆ. ಅದರಲ್ಲೂ ಕೊಡಗಿನ ಪ್ರಮುಖ ಸಮುದಾಯಗಳಲ್ಲಿ ಒಂದಾಗಿರುವ ಗೌಡ ಸಮಾಜದ ಏಳಿಗೆಗೆ ಸರಕಾರದ ವತಿಯಿಂದ ಸಹಾಯ ಮಾಡುವುದು ಅತ್ಯಂತ ಅವಶ್ಯಕ ಎಂಬುದನ್ನು ಮನಗಂಡು ತಾನು ಈ ಪ್ರಯತ್ನವನ್ನು ಮಾಡಿದ್ದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಸಮಾಜದ ಏಳಿಗೆಗೆ ಯಾವುದೇ ಬೇಡಿಕೆ ಸಲ್ಲಿಸಿದರು ತಾನು ಶಕ್ತಿ ಮೀರಿ ಪ್ರಯತ್ನಿಸಿ ಅದನ್ನು ಪೂರೈಸಲು ಬದ್ಧ ಎಂದು ಭರವಸೆ ನೀಡಿದರು.

ಕೊಡಗು ಗೌಡ ಸಮಾಜದ ಅಧ್ಯಕ್ಷ ದಂಬೆಕೋಡಿ ಆನಂದ, ಉಪಾಧ್ಯಕ್ಷ ಸೂರ್ತಲೆ ಸೋಮಣ್ಣ, ಕಾರ್ಯದರ್ಶಿ ಸಂದೀಪ್, ನಿರ್ದೇಶಕ ಕೊಲ್ಯದ ಗಿರೀಶ್ ಮತ್ತಿತರರು ಹಾಜರಿದ್ದರು.