ಚಂದ್ರಮೋಹನ್ ಎಂ.ಎನ್.
ಕುಶಾಲನಗರ, ಜ. ೧೯: ಮೈಸೂರು ಕುಶಾಲನಗರ ಪ್ರಸ್ತಾವಿತ ಬ್ರಾಡ್ ಗೇಜ್ ರೈಲ್ವೆ ಮಾರ್ಗದ ಯೋಜನೆ ಕಾರಣಾಂತರಗಳಿAದ ರದ್ದುಗೊಂಡಿರುವ ಮಾಹಿತಿ ರೈಲ್ವೆ ಅಧಿಕಾರಿಗಳ ಮೂಲಕ ಹೊರ ಬಿದ್ದಿದೆ.
ಕೊಡಗು ಜಿಲ್ಲೆಯ ಜನತೆ ೨೦೧೨ರಿಂದ ಕಾಯುತ್ತಿದ್ದ ಯೋಜನೆ ಇದೀಗ ರೈಲ್ವೆ ಆರ್ಥಿಕ ಬಿಕ್ಕಟ್ಟಿನೊಂದಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಿರಾಸಕ್ತಿಯಿಂದ ಪ್ರಸ್ತಾವಿತ ಯೋಜನೆ ಕೈಬಿಡಲಾಗಿದೆ.
ಅಂದಾಜು ೬೦೦ ಕೋಟಿ ವೆಚ್ಚದ ಪ್ರಾರಂಭದ ಹಂತದ ಯೋಜನೆ ನಂತರ ೧೮೪೫ ಕೋಟಿ ರೂಗಳಿಗೆ ಜಿಗಿತಗೊಂಡಿತ್ತು.
ಈಗಾಗಲೇ ಘೋಷಣೆಗೊಂಡು ಸುಮಾರು ೧೪ ವರ್ಷಗಳು ಸಂದಿದ್ದು, ಯೋಜನೆಗೆ ರಾಜ್ಯ ಹಾಗೂ ಕೇಂದ್ರ ನಡುವೆ ತೊಡಕುಗಳು ಎದುರಾಗಿ ಯೋಜನೆ ಚರ್ಚೆಗಷ್ಟೇ ಸೀಮಿತಗೊಂಡಿತ್ತು.
ಜನವರಿ ೨೦೧೨ರಲ್ಲಿ ಅಂದಿನ ರೈಲ್ವೆ ಸಚಿವರಾಗಿದ್ದ ಕೆ.ಎಚ್. ಮುನಿಯಪ್ಪ ಅವರು ಮೈಸೂರು ಕುಶಾಲನಗರ ನೂತನ ರೈಲು ಮಾರ್ಗ ಸರ್ವೆ ಕಾರ್ಯಕ್ಕೆ ಕುಶಾಲನಗರದಲ್ಲಿ ಚಾಲನೆ ನೀಡಿರುವುದು ಕೇವಲ ನೆನಪಾಗಿ ಉಳಿದಿದೆ.
ಪ್ರಾರಂಭದಲ್ಲಿ ಯೋಜನೆಯ ಮೂಲಕ ಕೊಡಗಿನ ಏಕೈಕ ಕೈಗಾರಿಕಾ ಬಡಾವಣೆಯ ಉದ್ಯಮಿಗಳಿಗೆ ಒಂದು ರೀತಿಯ ಪೂರಕ ಮೂಲಭೂತ ಸೌಲಭ್ಯ ಒದಗಿಸುವ ಕನಸು ಚಿಗುರುವ ಮೊಳಕೆ ಆಗಿತ್ತು.
ನೆರೆಯಲ್ಲಿರುವ ಟಿಬೆಟಿಯನ್ ನಾಗರಿಕರು ಹಾಗೂ ಕುಶಾಲನಗರದಲ್ಲಿರುವ ಉತ್ತರ ಭಾರತದ ಜನತೆಗೆ ಈ ಸಂಪರ್ಕ ಭಾರಿ ಅನುಕೂಲತೆ ಕಲ್ಪಿಸುವ ಸಾಧ್ಯತೆ ಬಗ್ಗೆ ಚರ್ಚೆಗಳು ಚಿಗುರೊಡೆಯಲು ಆರಂಭಿಸಿತ್ತು.
ಕೊಡಗು ಜಿಲ್ಲೆಯ ಕಾಫಿ ಉದ್ಯಮ ಜಿಲ್ಲೆ ಹಾಗೂ ನೆರೆ ಜಿಲ್ಲೆಗಳ ಬೆಳೆಗಳಾದ ತಂಬಾಕು ಮುಸುಕಿನ ಜೋಳ ಶುಂಠಿ ಇತ್ಯಾದಿ ವಾಣಿಜ್ಯ ಬೆಳೆಗಳ ಸಾಗಾಟ ಪ್ರಕ್ರಿಯೆಗಳಿಗೆ ಈ ಯೋಜನೆ ಲಾಭದಾಯಕ ಎನ್ನುವ ಮಾತು ಕೇಳಿಬಂದಿತ್ತು.
ಮೈಸೂರು ಬೆಳಗೊಳ -ಕುಶಾಲನಗರ ನಡುವಿನ ೮೦ ಕಿಲೋಮೀಟರ್ ಅಂತರದ ಮಾರ್ಗದ ನಡುವೆ ಸೇತುವೆಗಳು ಇನ್ನಿತರ ನಿರ್ಮಾಣ ಸೇರಿದಂತೆ ೬೦೦ ಕೋಟಿ ವೆಚ್ಚದ ಅಂದಾಜು ಪಟ್ಟಿ ಕೇಂದ್ರ ಯೋಜನಾ ಆಯೋಗದ ಮುಂದೆ ಇಡಲಾಗಿತ್ತು.
ಯೋಜನೆಯ ಅರ್ಧ ವೆಚ್ಚ ರೂ. ೩೦೦ ಕೋಟಿ ಸರ್ಕಾರ ಭರಿಸುವುದರೊಂದಿಗೆ ಉಚಿತ ಭೂಮಿಯನ್ನು ನೀಡುವ ಒಪ್ಪಿಗೆ ಸೂಚಿಸಲಾಗಿತ್ತು. ಕೊಡಗು ಮೈಸೂರು ಜಿಲ್ಲೆಗಳ ಗಡಿ ಭಾಗದ ಕಾವೇರಿ ನದಿ ತಟದ ಗಿರಗೂರು ಭಾಗದಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣ ಆಗಲಿದೆ ಎನ್ನುವ ಮಾಹಿತಿ ಕೂಡ ಹೊರಬರುವುದರೊಂದಿಗೆ ಸ್ಥಳ ಪರಿಶೀಲನೆ ಕೂಡ ನಡೆದಿತ್ತು. ಆದರೆ ಯೋಜನೆ ಯಾವುದೇ ರೀತಿಯ ಅಭಿವೃದ್ಧಿ ಕಾಣದೆ ನೆನೆಗುದಿಗೆ ಬೀಳುವುದರೊಂದಿಗೆ ಹಿಂದಿನ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಈ ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಅಧ್ಯಯನ ನಡೆಸುತ್ತಿದೆ ಎಂದು ಹೇಳಿಕೆ ನೀಡಿದ್ದನ್ನು ಕೂಡ ಇಲ್ಲಿ ಸ್ಮರಿಸಬಹುದು. ಆಗಿನ ಕೇಂದ್ರ ಸಚಿವರಾಗಿದ್ದ ಸದಾನಂದ ಗೌಡ ಅವರು ಕೂಡ ಈ ಯೋಜನೆಯನ್ನು ಜಾರಿಗೊಳಿಸುತ್ತೇನೆ ಎಂದಿದ್ದ ಮಾತು ಕೇವಲ ಭರವಸೆಯಾಗಿಯೇ ಉಳಿಯಿತು. ರೈಲು ಯೋಜನೆ ಕಾರ್ಯಗತಗೊಳಿಸಲು ರಾಜ್ಯ ಸರ್ಕಾರದ ಇಚ್ಚಾ ಶಕ್ತಿ ಕೊರತೆ ಇದೆ ಎನ್ನುವುದನ್ನು ಆಗಿನ ಕೊಡಗು ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಕೂಡ ತಿಳಿಸಿದ್ದರು. ಪ್ರತಾಪ್ ಸಿಂಹ ಪ್ರಯತ್ನದಿಂದ ೨೦೨೩ರಲ್ಲಿ ಇಲಾಖೆ ಅಂತಿಮ ಸ್ಥಳ ಸಮೀಕ್ಷೆ ಕೂಡ ನಡೆಸಿತ್ತು. ಇದಕ್ಕೆ ಪೂರಕವಾಗಿ ಆಗಿನ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಕೆ ಜೆ ಜಾರ್ಜ್ ಮಡಿಕೇರಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿ ನೂತನ ರೈಲ್ವೆ ಯೋಜನೆಗಳಿಗೆ ರಾಜ್ಯದಿಂದ ಹಣ ಕೊಡಲು ಸಾಧ್ಯವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದರು.
ಈ ನಡುವೆ ಇತ್ತೀಚೆಗೆ ಮೈಸೂರು ಕುಶಾಲನಗರ ರೈಲ್ವೆ ಯೋಜನೆಗೆ ಆಸಕ್ತಿ ಇಲ್ಲವೆಂದು ರಾಜ್ಯ ಸರ್ಕಾರ ಪತ್ರ ಬರೆದಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ತಿಳಿಸಿದ್ದು ಮೈಸೂರು ಕುಶಾಲನಗರ ರೈಲ್ವೆ ಯೋಜನೆ ಇನ್ನು ಅನೇಕ ವರ್ಷ ಕನಸಾಗಿ ಉಳಿದುಕೊಳ್ಳಲಿದೆ ಎನ್ನುವ ಮಾಹಿತಿಯನ್ನು ಅವರು ನೀಡಿದ್ದರು. ಈ ಯೋಜನೆಯ ಭೂ ಸ್ವಾದೀನ ಮಾಡಿಕೊಳ್ಳಲು ಕ್ಷಣಗಣನೆ ಆರಂಭವಾಗಿದ್ದ ಬೆನ್ನಲ್ಲೇ ರಾಜ್ಯ ಸರ್ಕಾರದ ಹೂಡಿಕೆ ಸಮಿತಿ ಈ ಯೋಜನೆ ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂಬ ನೆಪ ನೀಡಿದ ಮೇರೆಗೆ ಕೊಡಗಿನ ರೈಲ್ವೆ ಸಂಪರ್ಕಕ್ಕೆ ಅತಿ ದೊಡ್ಡ ಹಿನ್ನಡೆ ಆದಂತಾಗಿದೆ.
ವಾರ್ಷಿಕವಾಗಿ ಕೋಟಿಗಟ್ಟಲೆ ರೂಪಾಯಿ ತೆರಿಗೆ ಪಾವತಿಸುವ ಪುಟ್ಟ ಜಿಲ್ಲೆ ಕೊಡಗು ಇಂದಿಗೂ ರೈಲು ಸಂಪರ್ಕದಿAದ ವಂಚಿತವಾಗಿದ್ದು ರಕ್ಷಣಾ ಇಲಾಖೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಯೋಧರ ಪ್ರಯಾಣಕ್ಕೆ ಅನುಕೂಲ ಆದಂತಾಗುತ್ತಿತ್ತು. ಪ್ರವಾಸಿಗರ ಪ್ರಯಾಣಕ್ಕೆ ಕೂಡ ಅನುಕೂಲ ದೊರೆಯುತ್ತಿತ್ತು.
ಕ್ಷೇತ್ರದ ಶಾಸಕರು ಸಂಸದರು ಈ ವಿಷಯದಲ್ಲಿ ಅಗತ್ಯವಾಗಿ ಧ್ವನಿ ಎತ್ತುವ ಮೂಲಕ ರೈಲ್ವೆ ಯೋಜನೆಗೆ ಮತ್ತೆ ಮರುಜೀವ ತುಂಬಿಸಬೇಕು ಎನ್ನುವುದು ಈ ಭಾಗದ ಜನರ ಸಾರ್ವಜನಿಕರ ಆಶಯವಾಗಿದೆ.
ಒಟ್ಟಾರೆ ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ಯೋಧರ ನಾಡು ಕೊಡಗು ಜಿಲ್ಲೆಗೆ ಸಂಪರ್ಕ ಬೆಸೆಯುವ ರೈಲು ಯೋಜನೆ ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾಪವಾಗದಿದ್ದಲ್ಲಿ ಯೋಜನೆ ಕೇವಲ ಒಂದು ರೀತಿಯ ಮರೀಚಿಕೆ ಆದಂತೆ ಆಗುವುದು ಖಚಿತ ಎನ್ನಬಹುದು.