ವೀರಾಜಪೇಟೆ, ಜ. ೨೦: ಈಚೂರು ಗ್ರಾಮದಲ್ಲಿನ ಮೂರು ಡಾಂಬರು ತಯಾರಕ ಘಟಕಗಳಿಂದ ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಶಾಸಕರಿಂದ ಮಹತ್ವದ ಸಭೆ ನಡೆದು ಮೇ ೩೧ರ ಬಳಿಕ ಘಟಕ ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಲಾಯಿತು.
ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಭೆ ಕರೆದು ಚರ್ಚಿಸಿದರು.
ಇತ್ತೀಚೆಗೆ ಈಚೂರು ಭಾಗದಲ್ಲಿ ಸಾರ್ವಜನಿಕರ ದೂರು ಬಂದ ಮೇರೆಗೆ ಅಲ್ಲಿಯ ಡಾಂಬರು ತಯಾರಕ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಆ ಸಂದರ್ಭದಲ್ಲಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದ ಶಾಸಕರು, ಜನರ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದ್ದರು. ಆ ಪ್ರಯುಕ್ತ ಸಂಬAಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕರು ಸಾರ್ವಜನಿಕರಿಗೆ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದರು.
ಮೇ ೩೧ರ ಒಳಗಾಗಿ ಈ ಘಟಕದ ಕಾರ್ಯ ಚಟುವಟಿಕೆಯನ್ನು ನಿಲ್ಲಿಸುವಂತೆ ಸೂಚಿಸಲಾಯಿತು. ಇದಕ್ಕೆ ಸ್ಥಳೀಯ ಮಾಲೀಕರುಗಳು ಹಾಗೂ ಸಾರ್ವಜನಿಕರು ಒಪ್ಪಿಗೆ ಸೂಚಿಸಿದರು.
ಆರಂಭದಲ್ಲಿ ಮಾತನಾಡಿದ ಶಾಸಕ ಎ.ಎಸ್ ಪೊನ್ನಣ್ಣ, ೨೦೧೭ ರಲ್ಲಿ ನವೀನ್ ಹಾಗೂ ತಿಮ್ಮಯ್ಯ ಎನ್ನುವವರು ಗ್ರಾಪಂ ನಿಂದ ಅನುಮತಿ ಪಡೆದು ಈ ಘಟಕವನ್ನು ಆರಂಭಿಸಿದ್ದಾರೆ. ವಾಸ್ತವವಾಗಿ ಗ್ರಾ.ಪಂ ಈ ರೀತಿ ಅನುಮತಿ ನೀಡಲು ಅವಕಾಶ ಇಲ್ಲ. ಆದರು ನೀಡಿದೆ. ನಂತರ ಈ ಘಟಕದವರು ೨೦೨೧ ರಿಂದ ಕೈಗಾರಿಕ ಘಟಕದ ರೀತಿ ಭೂ-ಪರಿವರ್ತನೆ ನಿಯಮನುಸಾರ ಮಾಡಿಕೊಂಡು ಡಾಂಬರು ಘಟಕ ಮತ್ತು ಕಾಂಕ್ರೀಟ್ ಮಿಶ್ರಣ ಘಟಕ ನಡೆಸುತ್ತಾ ಬಂದಿದ್ದಾರೆ.
ಇದಕ್ಕೆ ವಾಯು ಮಾಲಿನ್ಯ ಮಂಡಳಿಯಿAದ ೧೦ ವರ್ಷದ ಅನುಮತಿಯನ್ನು ಪಡೆದಿದ್ದಾರೆ. ಒಟ್ಟಾರೆ ಎಂಟು ವರ್ಷದಿಂದ ಈ ಘಟಕಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ೨೦೨೪ ರಲ್ಲಿ ಗ್ರಾಮಸ್ಥರ ವಿರೋಧ ಕಾರಣ ಗ್ರಾ.ಪಂ ಇದರ ಪರವಾನಿಗೆ ನವೀಕರಿಸಿಲ್ಲ. ಆಗ ಸಂಸ್ಥೆಯವರು ರಾಜ್ಯ ಉಚ್ಚ ನ್ಯಾಯಾಲಯದಿಂದ ತಡೆ ತಂದು ಕೆಲಸ ಮುಂದುವರಿಸಿದ್ದಾರೆ. ಜೊತೆಗೆ ಗ್ರಾಮಸ್ಥರು ಸಹ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದಾರೆ ಎಂಬ ಮಾಹಿತಿಯನ್ನು ಸಭೆ ಮುಂದಿಟ್ಟರು.
ಈ ವಿಚಾರವಾಗಿ ತಾನು ಸಹ ಸ್ಥಳ ಪರಿಶೀಲನೆ ನಡೆಸಿದಾಗ ಅಲ್ಲಿ ವಾಯು ಮಾಲಿನ್ಯ ಕಂಡು ಬಂದಿದ್ದು, ಮತ್ತು ಜನರಿಗೆ ಈ ಘಟಕದಿಂದ ಸಮಸ್ಯೆ ಇರುವುದು ಕಂಡು ಬಂದಿದೆ. ಆದ್ದರಿಂದ ಅಧಿಕಾರಿಗಳ ಸಭೆಯನ್ನು ಕರೆದಿರುವುದಾಗಿ ಹೇಳಿದರು.
ಗ್ರಾಮಸ್ಥರಾದ ತಾತೀರ ಬೋಪಯ್ಯ ಮಾತನಾಡಿ, ೨೦೧೭ನೇ ಸಾಲಿನಿಂದ ಆರಂಭವಾದ ಈ ಘಟಕ ನಂತರ ಬೃಹತ್ ಕೈಗಾರಿಕ ಘಟಕವಾಗಿ ಮಾರ್ಪಟ್ಟು ಇಂದು ಜನರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಹೊಗೆಯಿಂದ ವಾಯುಮಾಲಿನ್ಯ ಉಂಟಾಗುತ್ತಿದೆ. ಜಲ ಮಾಲಿನ್ಯವಾಗುತ್ತಿದೆ. ಸುಂದರ ಹಸಿರು ಪರಿಸರದಲ್ಲಿ ವಾಯು ಮಾಲಿನ್ಯ ನಿರಂತರವಾಗಿ ಹೆಚ್ಚುತ್ತಿರುವುದನ್ನು ವೈಜ್ಞಾನಿಕವಾಗಿ ಕಂಡುಕೊAಡಿದ್ದೇವೆ ಎಂದರು.
ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಗ್ರಾಮಸ್ಥರ ಪರವಾಗಿ ಮಾತನಾಡಿ, ಒಂದು ಘಟಕ ಇರಲಿ ಎಂಬ ಮಾತು ಕೇಳಿ ಬರುತ್ತಿದೆ. ತಾರತಮ್ಯ ಇಲ್ಲದೆ ಎಲ್ಲಾ ಘಟಕಗಳು ಮುಚ್ಚುವಂತಾಗಬೇಕೆAದರು. ಪ್ರಮುಖರಾದ ಕಿಲನ್ ಗಣಪತಿ ಗ್ರಾಮಸ್ಥರ ಪರವಾಗಿ ಮಾತನಾಡಿದರು.
ಘಟಕದ ಮಾಲಿಕರುಗಳಾದ ನವೀನ್ ಮತ್ತು ತಿಮ್ಮಯ್ಯ ಮಾತನಾಡಿ, ನಿಯಮ ಪ್ರಕಾರವಾಗಿ ಎಲ್ಲಾ ನಡೆಸುತ್ತಿದ್ದೇವೆ. ಇದು ಕೊಡಗಿನ ಅಭಿವೃದ್ದಿ ದೃಷ್ಟಿಯಿಂದ ಅಗತ್ಯಗತ್ಯ. ನಾಳೆ ಬೇರೆ ಕಡೆ ಸ್ಥಳಾಂತರ ಮಾಡಿದರು ಸಹ ಇದೇ ರೀತಿ ವಿರೋಧ ಬರುತ್ತದೆ. ತಾವು ಸಾಕಷ್ಟು ಬಂಡವಾಳ ಹಾಕಿರುವುದಾಗಿ ಹೇಳಿದರು.
ಚರ್ಚೆ ನಡೆದು ಮೇ.೩೧ ರ ಬಳಿ ಘಟಕವನ್ನು ಮುಚ್ಚಿ ಗ್ರಾಮಸ್ಥರಿಗೆ ಸಹಕರಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಕಾಂಕ್ರೀಟ್ ಘಟಕದಿಂದ ಮಾಲಿನ್ಯ ಆಗದಂತೆ ನೋಡಿಕೊಳ್ಳಬೇಕೆಂದು ಸಭೆಯಲ್ಲಿದ್ದ ವಾಯು ಮಾಲಿನ್ಯ ಅಧಿಕಾರಿ ರಘುರಾಮ್ ಸೂಚಿಸಿ ಇದಕ್ಕೆ ವಿರುದ್ಧವಾಗಿ ಕಂಡು ಬಂದರೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುತ್ತಾರೆ. ಜೊತೆಗೆ ಜನರಿಗೆ ತೊಂದರೆ ಆಗದಂತೆ ಘಟಕವನ್ನು ಬೆಳಿಗ್ಗೆ ೮ ರಿಂದ ಸಂಜೆ ೬ ರವರಗೆ ನಡೆಸುವಂತೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಸೋಮಶೇಖರ್, ಜಿಲ್ಲಾ ಉಪವಿಭಾಗಧಿಕಾರಿ ನಿತಿನ್ ಚಕ್ಕಿ, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಅಪ್ಪಣ್ಣ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಪ್ರವೀಣ್, ಎ.ಸಿ.ಎಫ್ ಕಂಬೆಯAಡ ಗೋಪಾಲ್, ಡಿವೈಎಸ್ಪಿ ಮಹೇಶ್ ಕುಮಾರ್, ಗೋಣಿಕೊಪ್ಪ ಪೊಲೀಸ್ ಅಧಿಕಾರಿಗಳು, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.