ಮಡಿಕೇರಿ. ಜ, ೨೦: ಕಳೆದ ಶೈಕ್ಷಣಿಕ ವರ್ಷದ ೧೦ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿ ಆಶ್ರಯ್ ಅಕ್ಕಮ್ಮ ಅತ್ಯುತ್ತಮ ಅಂಕಗಳನ್ನು ಗಳಿಸುವುದರ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ಗುಣಮಟ್ಟದ ಫಲಿತಾಂಶವನ್ನು ತಂದುಕೊಟ್ಟAತಹ ಎಲ್ಲಾ ವಿದ್ಯಾರ್ಥಿಗಳ ಸಾಧನೆಯನ್ನ ಪ್ರಶಂಸಿಸುವ ಸಲುವಾಗಿ ‘ಸಾಧಕ ಸಂಭ್ರಮ್’ ಎಂಬ ಕಾರ್ಯಕ್ರಮವನ್ನು ಶಾಲೆಯಲ್ಲಿ ಏರ್ಪಡಿಸಲಾಗಿತ್ತು.

೬೨೫ ಅಂಕಗಳಿಗೆ ೬೨೩ ಅಂಕಗಳನ್ನು ಗಳಿಸಿ, ಜಿಲ್ಲೆಗೆ ಪ್ರಥಮ ಸ್ಥಾನ ತಂದುಕೊಟ್ಟAತಹ ವಿದ್ಯಾರ್ಥಿನಿಯಾದ ಆಶ್ರಯ ಅಕ್ಕಮ್ಮ, ಅತ್ಯುತ್ತಮ ಅಂಕ ಗಳಿಸಿದ ಇತರ ವಿದ್ಯಾರ್ಥಿಗಳಾದ ಮಾನವಿ ಮುತ್ತಮ್ಮ, ಭುವನ ಪೂವಯ್ಯ, ಸಮೃದ್ಧಿ ಕೆ. ಟಿ, ದೇವಯ್ಯ ಪಿ.ಎಸ್, ಅನಲ್ ಪಿ.ಎಸ್, ವರ್ಷಿತ, ಆಯಿಷ ರಿಹ, ದಿಯಾ ಎಂ.ಎಸ್, ಫೈಕಾ ಫೆರಿನ್, ಸಂಜನಾ ಭಟ್ ಅವರುಗಳಿಗೆ ಸ್ಮರಣ ಫಲಕಗಳನ್ನು ನೀಡಲಾಯಿತು.

ಈ ಸಂದರ್ಭ ಮಾತನಾಡಿದ, ಪೋಷಕ ಶಿಕ್ಷಕ ಸಮಿತಿಯ ಅಧ್ಯಕ್ಷರಾದ ಅಮಿತ್, ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಇದರ ಹಿಂದೆ ಇರುವಂತಹ ಪೋಷಕ, ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಶ್ರಮವನ್ನು ಶ್ಲಾಘಿಸಿದರು.

ಪೋಷಕ ಶಿಕ್ಷಕ ಸಮಿತಿಯ ಕಾರ್ಯದರ್ಶಿ ಜಮೀಲ ಮಾತನಾಡಿ, ವಿದ್ಯಾರ್ಥಿಗಳು ಸಾಧನೆ ಮಾಡುವುದರ ಜೊತೆಗೆ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುದೇಶ್ ಬಿ.ಎಸ್ ಪ್ರಾಸ್ತಾವಿಕ ನುಡಿಗಳನ್ನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯದರ್ಶಿ ವಿನೋದ್ ಪಿ.ಎನ್ ಮಾತನಾಡಿ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿಯೂ ಸಹ ಎಲ್ಲರೂ ಮೆಚ್ಚುವಂತಹ ಸಾಧನೆಗಳನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಪಾರ್ವತಿ ಯು.ಪಿ, ಸಂಯೋಜಕಿ ಅಮೃತ ಅರ್ಜುನ್, ಪೋಷಕ ಶಿಕ್ಷಕ ಸಮಿತಿಯ ಪೋಷಕ ಸದಸ್ಯರು, ಬೋಧಕ-ಬೋಧಕೇತರ ವೃಂದದವರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಮನರಂಜನಾ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ನಂತರ ಔತಣ ಕೂಟ ನಡೆಯಿತು. ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಮುಖ್ಯ ಶಿಕ್ಷಕಿ ಪಾರ್ವತಿ ಯು. ಪಿ, ವಂದನಾರ್ಪಣೆಯನ್ನು ಸಂಯೋಜಿಕಿ ಅಮೃತ ಅರ್ಜುನ್, ನಿರೂಪಣೆಯನ್ನು ತಂಸೀನಾ ಹಾಗೂ ಸುಪ್ರೀತ ನೆರವೇರಿಸಿದರು.