ಸೋಮವಾರಪೇಟೆ, ಜ. ೨೦: ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಶಾಸಕ ಡಾ. ಮಂತರ್ ಗೌಡ ಭರವಸೆ ನೀಡಿದರು.

ತಾಲೂಕಿನ ತಣ್ಣೀರುಹಳ್ಳ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಜನ ಸಂದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಣ್ಣೀರುಹಳ್ಳ ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಗ್ರಾಮದಲ್ಲಿನ ಮನೆಗಳಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಲಾಗುವುದು. ಈ ಬಗ್ಗೆ ತಹಶೀಲ್ದಾರ್‌ರೊಂದಿಗೆ ಚರ್ಚಿಸಿ, ವಿಶೇಷ ತಂಡ ರಚನೆ ಮಾಡಿ ಸಮಸ್ಯೆ ಬಗೆಹರಿಸಲು ಗಮನ ಹರಿಸಲಾಗುವುದು.

ಅಪಾಯದ ಸ್ಥಿತಿಯಲ್ಲಿರುವ ಮನೆಗಳನ್ನು ಗುರುತಿಸಿ ತಡೆಗೋಡೆ ಕಾಮಗಾರಿ ಕೈಗೊಳ್ಳಲಾಗುವುದು. ಸಮುದಾಯ ಭವನದ ಅಡುಗೆ ಮನೆ ಹಾಗೂ ವಿವಿಧ ಕಾಮಗಾರಿಗೂ ಅನುದಾನ ಒದಗಿಸುವುದಾಗಿ ಶಾಸಕರು ತಿಳಿಸಿದರು.

ಪಕ್ಷದ ಹಿರಿಯ ಮುಖಂಡ ಎಸ್.ಎಂ. ಸಿಡಿಲ್ವಾ ಅವರು ಗ್ರಾಮದ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಗ್ರಾಮಸ್ಥರು ಕಳೆದ ಮೂರು ತಲೆಮಾರುಗಳಿಂದ ಈ ಗ್ರಾಮದಲ್ಲಿ ವಾಸವಿದ್ದರೂ, ಈ ಜಾಗ ಅರಣ್ಯ ಇಲಾಖೆಗೆ ಸೇರಿದೆ ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ. ಇಲ್ಲಿ ವಾಸ ಮಾಡುತ್ತಿರುವವರ ಮನೆಗೆ ಯಾವುದೇ ದಾಖಲಾತಿ ಇಲ್ಲ. ಎಲ್ಲರಿಗೂ ಹಕ್ಕು ಪತ್ರ ನೀಡುವ ಕೆಲಸವಾಗಬೇಕು ಎಂದು ಮನವಿ ಮಾಡಿದರು.

ಗ್ರಾಮದ ಎಂ.ಸಿ. ದರ್ಶನ್ ಮಾತನಾಡಿ, ನಾವು ಲೈನ್ ಮನೆಯಲ್ಲಿ ವಾಸಿಸುತ್ತಿದ್ದು, ನಮಗೆ ಆಶ್ರಯ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕು. ತಣ್ಣೀರುಹಳ್ಳದಿಂದ ವಳಗುಂದ ಗ್ರಾಮಕ್ಕೆ ತೆರಳುವ ರಸ್ತೆ ತೀವ್ರ ಹದಗೆಟ್ಟಿದ್ದು ಸರಿಪಡಿಸಬೇಕೆಂದು ಬೇಡಿಕೆ ಮುಂದಿಟ್ಟರು.

ಗ್ರಾಮದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನಕ್ಕೆ ೧೫ ವರ್ಷ ಕಳೆದರೂ ಇನ್ನೂ ಉದ್ಘಾಟನೆಯಾಗಿಲ್ಲ. ಭವನದ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಸಮುದಾಯ ಭವನ ಸಮಿತಿ ಅಧ್ಯಕ್ಷ ಪ್ರವೀಣ್ ಅವರು ಶಾಸಕರಿಗೆ ಮನವಿ ಸಲ್ಲಿಸಿದರು.

ಸಭೆಯ ಅಧ್ಯಕ್ಷತೆಯನ್ನು ಬೂತ್ ಅಧ್ಯಕ್ಷ ಟಿ.ಬಿ. ಹರೀಶ್ ವಹಿಸಿದ್ದರು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸತೀಶ್, ತಾಲೂಕು ಯುವ ಘಟಕದ ಅಧ್ಯಕ್ಷ ಕಿರಣ್ ಉದಯಶಂಕರ್, ಪಂಚಾಯಿತಿ ಸದಸ್ಯರಾದ ಪ್ರವೀಣ್, ಅಶ್ವಿನಿ, ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಲಾರೆನ್ಸ್, ಬೂತ್ ಉಪಾಧ್ಯಕ್ಷ ರಫೀಕ್, ಕಾರ್ಯದರ್ಶಿ ಆನಂದ್ ರಾಜ್, ಸೋಹನ್ ಡಿಸಿಲ್ವಾ, ವಲಯ ಅಧ್ಯಕ್ಷ ಲೋಕೇಶ್, ವಲಯ ಪ್ರಚಾರ ಸಮಿತಿ ಅಧ್ಯಕ್ಷ ದಿವಾಕರ್ ಮತ್ತು ಗ್ರಾಮಸ್ಥರು ಇದ್ದರು.