ಮಡಿಕೇರಿ, ಜ. ೨೦: ಸುಂಟಿಕೊಪ್ಪದ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದಲ್ಲಿ ಸಂಸ್ಥೆಯ ಸಮುದಾಯ ಆಧಾರಿತ ಪುನರ್ವಸತಿ ಯೋಜನೆ ಮತ್ತು ಬೆಂಗಳೂರಿನ ಶ್ರೀ ಕೇಶವ ಟ್ರಸ್ಟ್ ಸಹಯೋಗದೊಂದಿಗೆ ವಿಶೇಷಚೇತನರು ಮತ್ತು ಅವರ ಆರೈಕೆದಾರರಿಗೆ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ - ಕೊಡಗು ವಿಭಾಗದ ಅಧ್ಯಕ್ಷರು ಮತ್ತು ರೋಹಿಣಿ ಡಯಗ್ನೊಸ್ಟಿಕ್ ಸೆಂಟರ್ ಮುಖ್ಯಸ್ಥ ರೇಡಿಯೊಲೊಜಿಸ್ಟ್ ಡಾ. ಶ್ಯಾಮ್ ಅಪ್ಪಣ್ಣ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾಯಿಲೆಗಳನ್ನು ಮುಂಚಿತವಾಗಿ ನಿರ್ಣಯ ಮಾಡುವುದರ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಅವರು, ಈ ಶಿಬಿರವು ರೋಗ ಲಕ್ಷಣಗಳನ್ನು ಪತ್ತೆಹಚ್ಚಿ ಮುಂದಿನ ಚಿಕಿತ್ಸೆಯ ಸಿದ್ಧತೆಗೆ ಸಹಕಾರಿ ಎಂದು ನುಡಿದರು.

ಬೆಂಗಳೂರಿನ ಶ್ರೀ ಕೇಶವ ಟ್ರಸ್ಟ್, ಪ್ರಭಾ ಕಣ್ಣಿನ ಚಿಕಿತ್ಸಾಲಯ, ವಿಠ್ಠಲ ಕಣ್ಣಿನ ಆಸ್ಪತ್ರೆ ಇದರ ಅಧ್ಯಕ್ಷ ನೇತ್ರತಜ್ಞ ಡಾ. ಪ್ರವೀಣ್ ಆರ್.ಮೂರ್ತಿ ಮಾತನಾಡಿ, ದೃಷ್ಟಿ ಸಮಸ್ಯೆಗಳಿಗೆ ಇರುವ ಥೆರಪಿಗಳ ಬಗ್ಗೆ ವಿವರಿಸಿ, ಚಿಕಿತ್ಸೆ ಮತ್ತು ಥೆರಪಿಗಳ ವಿಧಾನಗಳು ಮತ್ತು ರೋಗಿಗಳ ಪಾಲಕರಿಗೆ ತರಬೇತಿಯ ಬಗ್ಗೆ ಮಾಹಿತಿ ನೀಡಿದರು.

ಬೆಂಗಳೂರಿನ ಆಪ್ಟೋಮೆಟ್ರಿ ಕಾಲೇಜಿನ ವಿಭಾಗ ಮುಖ್ಯಸ್ಥ ಪ್ರೊ. ದಿವಾಕರ್ ನೇತ್ರ ರೋಗ ನಿರ್ಣಯ ಮಾಡುವ ಸೌಲಭ್ಯದ ಕುರಿತು ವಿಚಾರ ಹಂಚಿಕೊAಡರು.

ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ, ದ ಕೂರ್ಗ್ ಫೌಂಡೇಶನ್ ಟ್ರಸ್ಟಿ ಗಂಗಾ ಚಂಗಪ್ಪ ಮತ್ತು ಸ್ವಸ್ಥ ಪಾಲಿಬೆಟ್ಟ ಕೇಂದ್ರದ ಮುಖ್ಯಸ್ಥೆ ಐಶ್ವರ್ಯ ಬೋಪಯ್ಯ ಅವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬೆಂಗಳೂರಿನ ವಿಠ್ಠಲ ಕಣ್ಣಿನ ಆಸ್ಪತ್ರೆಯ ಗ್ಲುಕೋಮಾ ಸೇವೆಗಳ ಮುಖ್ಯಸ್ಥೆ ಡಾ. ಗೌರಿ ಜೆ. ಮೂರ್ತಿ, ಡಾ. ರಾಧಿಕಾ, ಆಪ್ಟೋಮೆಟ್ರಿಸ್ಟ್ ಪ್ರಜ್ಞಾ ಮತ್ತು ಸಹಾನ ಇವರ ತಂಡವು ಸುಮಾರು ೧೮೦ ಫಲಾನುಭವಿಗಳನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆಯ ನಿರ್ದೇಶನ ನೀಡಿದರು.

ಉಚಿತ ನೇತ್ರ ತಪಾಸಣಾ ಶಿಬಿರದ ಸುಮಾರು ೩೦ ಫಲಾನುಭವಿಗಳಿಗೆ ಉಚಿತ ಕನ್ನಡಕದ ವ್ಯವಸ್ಥೆ ಮತ್ತು ೫ ಫಲಾನುಭವಿಗಳಿಗೆ ಶಸ್ತçಚಿಕಿತ್ಸೆಯ ವ್ಯವಸ್ಥೆಯ ಕಲ್ಪಿಸಲಾಯಿತು. ಸ್ವಸ್ಥ ಸಂಸ್ಥೆಯ ಸಮುದಾಯ ಆಧಾರಿತ ಪುನರ್ವಸತಿ ಕೇಂದ್ರದ ಸಿಬ್ಬಂದಿ ಮತ್ತು ವಿಶೇಷ ಶಿಕ್ಷಕರು ಕಾರ್ಯಕ್ರಮವನ್ನು ನಿರ್ವಹಿಸಿದರು.