ಮಡಿಕೇರಿ, ಜ. ೨೦: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಯೋಜನೆಯ ವಿಶೇಷ ನೋಂದಣಿ ಅಭಿಯಾನವನ್ನು ಏರ್ಪಡಿಸುವ ಕುರಿತು ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃದ್ಧ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಭಾರತ ಸರ್ಕಾರವು ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಎಂಬ ಮಹತ್ವಾಕಾಂಕ್ಷಿ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು, ಎಲ್ಲಾ ಅಸಂಘಟಿತ ವರ್ಗದ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಕಾರ್ಮಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂಬAಧಪಟ್ಟ ಎಲ್ಲಾ ಇಲಾಖೆಗಳು ಕ್ರಮವಹಿಸಿ ಜಿಲ್ಲೆಗೆ ನಿಗಧಿಪಡಿಸಿರುವ ಗುರಿಯನ್ನು ತಲುಪಲು ಶ್ರಮಿಸಬೇಕೆಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಟಿ.ಕಾವೇರಿ ಅವರು ೧೮ ರಿಂದ ೪೦ ವರ್ಷದೊಳಗಿನ ಅಸಂಘಟಿತ ಕಾರ್ಮಿಕರು ತಮ್ಮ ಆಧಾರ್ ಕಾರ್ಡ್, ಆಧಾರ್ ಲಿಂಕ್ ಆಗಿರುವ ಮೊಬೈಲ್, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಆರಂಭಿಕ ವಂತಿಕೆ ಮೊತ್ತಗಳೊಂದಿಗೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ಕೊಟ್ಟು ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ. ಹೆಚ್ಚು ಅಸಂಘಟಿತ ಕಾರ್ಮಿಕರು ವಾಸಿಸುವಂತಹ ಸ್ಥಳಗಳು, ಕಾರ್ಮಿಕರು ಸೇರುವಂತಹ ವಿವಿಧ ಇಲಾಖೆಗಳ ಸಭೆಗಳಲ್ಲಿ ಈ ಯೋಜನೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ನೋಂದಣಿ ಅಭಿಯಾನ ಯಶಸ್ವಿಗೊಳಿಸಬೇಕೆಂದು ಹೇಳಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಬಿ.ಎಸ್.ಚಂದ್ರಶೇಖರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕರಾದ ಸಿ.ಎನ್.ರಘು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್, ಜಿಲ್ಲಾ ಮಾಹಿತಿ ಮತ್ತು ತಂತ್ರಜ್ಞಾನ ಅಧಿಕಾರಿ ಸಿಂಧೂರ್ ರಾಮಪ್ಪ ತಳವಾರ್, ಮಡಿಕೇರಿ ವೃತ್ತದ ಹಿರಿಯ ಕಾರ್ಮಿಕ ನಿರಿಕ್ಷಕರಾದ ಎಂ.ಎA.ಯತ್ನಟ್ಟಿ, ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗಿರೀಶ್, ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಜಿಲ್ಲಾಧ್ಯಕ್ಷರಾದ ಮೇದಪ್ಪ ಮತ್ತು ಪದಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.