ಕೂಡಿಗೆ, ಜ. ೨೧: ಬೆಲೆ ಕಡಿಮೆ, ಕಾರ್ಮಿಕರ ಅಲಭ್ಯತೆ, ದುಬಾರಿ ನಿರ್ವಹಣಾ ವೆಚ್ಚ, ವನ್ಯ ಪ್ರಾಣಿಗಳ ಹಾವಳಿ ಮುಂತಾದ ಕಾರಣಗಳಿಂದಾಗಿ ಭತ್ತದ ಕೃಷಿಯನ್ನೇ ದೂರ ಮಾಡಿರುವ ಇಂದಿನ ಕಾಲಘಟ್ಟದಲ್ಲಿ ಅಲ್ಲಲ್ಲಿ ಕೆಲವರು ಕುಲ ಕಸುಬು ಎಂಬAತೆ ಭತ್ತ ಬೆಳೆಯುತ್ತಿದ್ದಾರೆ. ಭತ್ತದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಒದಗಿಸಿಕೊಡಬೇಕೆಂಬ ಕೂಗು ರಾಜ್ಯಾದ್ಯಂತ ಕೇಳಿ ಬರುತ್ತಲೇ ಇದೆ. ಇದರೊಂದಿಗೆ ಸರಕಾರವೇ ಭತ್ತ ಖರೀದಿ ಮಾಡುವಂತೆ, ಖರೀದಿ ಕೇಂದ್ರ ತೆರೆಯುವಂತೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸರಕಾರ ಕೃಷಿ ಉತ್ಪನ್ನ ಕೇಂದ್ರ, ರೈತ ಮಾರುಕಟ್ಟೆಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರದಿದೆ. ಭತ್ತಕ್ಕೆ ಇಂತಿಷ್ಟು ಎಂದು ಸರಕಾರಿ ದರ ನಿಗದಿಪಡಿಸಿದೆ. ಆದರೆ ಸರಕಾರ ನೀಡುತ್ತಿರುವ ದರ ಕಡಿಮೆ ಆಗಿರುವದಲ್ಲದೆ, ಭತ್ತ ನೀಡಲು ಸರಕಾರದ ನಿಯಮಾವಳಿಗಳು ರೈತರಿಗೆ ಸರಿ ಕಾಣದ ಹಿನ್ನೆಲೆಯಲ್ಲಿ ಯಾರೂ ಕೂಡ ಭತ್ತ ಖರೀದಿ ಕೇಂದ್ರದತ್ತ ಮುಖ ಮಾಡುತ್ತಿಲ್ಲ. ಇದುವರೆಗೆ ಒಬ್ಬ ರೈತ ಕೂಡ ನೋಂದಣಿ ಮಾಡಿಕೊಂಡಿಲ್ಲ..!

ರಾಜ್ಯ ಸರ್ಕಾರದ ನಿಯಮಾನುಸಾರ ಜಿಲ್ಲಾಧಿಕಾರಿಗಳ ಸೂಚನೆಯಂತೆ ಕುಶಾಲನಗರ ತಾಲೂಕು ಮತ್ತು ಸೋಮವಾರಪೇಟೆ ತಾಲೂಕಿನ ಭತ್ತÀ ಬೆಳೆದ ರೈತರಿಗೆ ಅನುಕೂಲ ಕಲ್ಪಿಸುವ ಹಿತದೃಷ್ಟಿಯಿಂದ ಸರ್ಕಾರ ನಿಗದಿಪಡಿಸಿದ ಬೆಲೆಯಲ್ಲಿ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ತಾಲೂಕು ಮಟ್ಟದ ಭತ್ತದ ಖರೀದಿ ಕೇಂದ್ರ ತೆರೆಯಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ಕೇಂದ್ರ ಆರಂಭಗೊAಡಿದೆಯಾದರೂ ಇದುವರೆಗೂ ಯಾವ ಒಬ್ಬ ರೈತ ಕೂಡ ನೋಂದಣಿ ಮಾಡಿಕೊಂಡಿಲ್ಲ. ಯಾರೂ ಕೂಡ ಕೇಂದ್ರಕ್ಕೆ ಭತ್ತ ಸಾಗಾಟ ಕೂಡ ಮಾಡಿಲ್ಲ.

ಕುಶಾಲನಗರ ತಾಲೂಕು ವ್ಯಾಪ್ತಿಯ ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ ಸಾವಿರಾರು ಎಕರೆಗಳಷ್ಟು ಪ್ರದೇಶದಲ್ಲಿ ಈ ಸಾಲಿನಲ್ಲಿ ಭತ್ತ ಬೆಳೆಯಲಾಗಿದೆ. ಆದರೆ ಸರಕಾರ ನಿಗದಿಪಡಿಸಿದ ಬೆಲೆ ಮತ್ತು ಖರೀದಿಗೆ ವಿಧಿಸಲಾಗಿರುವ ನಿಯಮಗಳು ರೈತರಿಗೆ ಸರಿಕಾಣದ ಹಿನ್ನೆಲೆಯಲ್ಲಿ ರೈತರು ಖರೀದಿ ಕೇಂದ್ರದತ್ತ ಹೋಗುತ್ತಿಲ್ಲ. ಭತ್ತಕ್ಕೆ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಪಕ್ಕದ ಜಿಲ್ಲೆಯ, ಮತ್ತು ಹೊರ ರಾಜ್ಯದ ಅನೇಕ ವ್ಯಾಪಾರಿಗಳು ರೈತರ ಜಮೀನಿಗೆ ಆಗಮಿಸಿ ಉತ್ತಮ ಬೆಲೆ ನೀಡುವ ಮೂಲಕ ಖರೀದಿ ಮಾಡುತ್ತಿರುವದರಿಂದ ರೈತರು ನೇರವಾಗಿ ವ್ಯಾಪಾರಿಗಳಿಗೆ ಭತ್ತ ಮಾರಾಟ ಮಾಡುತ್ತಿದ್ದಾರೆ.

೪ಐದನೇ ಪುಟಕ್ಕೆ

(ಮೊದಲ ಪುಟದಿಂದ)

ಆನ್‌ಲೈನ್ ನೋಂದಣಿ-ನಿಯಮ

ಭತ್ತ ಖರೀದಿ ಕೇಂದ್ರಕ್ಕೆ ಭತ್ತ ಮಾರಾಟ ಮಾಡಬೇಕೆಂದರೆ ರೈತರು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ನಂತರ ಭತ್ತ ಮಾರಾಟ ಮಾಡಬೇಕು. ಮಾರಾಟ ಮಾಡಿದ ನಂತರ ರೈತರ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಲಿದೆ. ಆದರೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಟ ೨ ರಿಂದ ಮೂರು ತಿಂಗಳುಗಳ ಕಾಲ ತೆಗೆದುಕೊಳ್ಳುವದರಿಂದ ಹಣದ ಅವಶ್ಯಕತೆ ಇರುವ ರೈತರು ಕೇಂದ್ರಕ್ಕೆ ಭತ್ತ ಮಾರಾಟ ಮಾಡಲು ಹಿಂಜರಿಯಲು ಒಂದು ಕಾರಣವಾಗಿದೆ. ಅದೂ ಅಲ್ಲದೆ ವ್ಯಾಪಾರಿಗಳಿಂದ ಭತ್ತದ ಕಣದಲ್ಲಿಯೇ ಹಣ ಸಿಗುವದರಿಂದ ರೈತರು ನೇರವಾಗಿ ಮಾರಾಟ ಮಾಡುತ್ತಿದ್ದಾರೆ.

ಮತ್ತೊಂದೆಡೆ ಸರಕಾರಿ ನಿಯಮದ ಪ್ರಕಾರ ರೈತರು ನೀಡುವ ಭತ್ತ ಗಟ್ಟಿಯಾಗಿರಬೇಕು, ಚೆನ್ನಾಗಿ ಒಣಗಿರಬೇಕು, ಧೂಳು, ಕಸಗಳಿರಬಾರದು ಎಂಬೆಲ್ಲ ನಿಯಮಗಳಿವೆ. ಆದರೆ, ವ್ಯಾಪಾರಿಗಳು ಇದ್ಯಾವುದನ್ನು ಪರಿಗಣಿಸದೇ ರೈತರು ನೀಡುವ ಭತ್ತಕ್ಕೆ ಉತ್ತಮ ಬೆಲೆ ನೀಡಿ ಖರೀದಿ ಮಾಡುತ್ತಿರುವದೂ ಇನ್ನೊಂದು ಕಾರಣವಾಗಿದೆ. ಅದೂ ಅಲ್ಲದೆ ಬಹುತೇಕ ರೈತರಿಗೆ ತಿಳುವಳಿಕೆ ಇಲ್ಲದ ಕಾರಣ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಹಿಂಜರಿಯುತ್ತಿರುವದೂ ಮತ್ತೊಂದು ಕಾರಣವಾಗಿದೆ. ರೈತರಿಂದ ಖರೀದಿ ಮಾಡುವ ಭತ್ತವನ್ನು ಕೇರಳ ಹಾಗೂ ತಮಿಳುನಾಡು ಕಡೆಗೆ ವ್ಯಾಪಾರಿಗಳು ರಫ್ತು ಮಾಡುತ್ತಾರೆ.

ಸಿಬ್ಬಂದಿ ಇಲ್ಲ..!

ಭತ್ತ ಖರೀದಿ ಕೇಂದ್ರ ತೆರೆದು ಎರಡು ತಿಂಗಳಾಗಿದೆ. ಕೇಂದ್ರದ ಉಸ್ತುವಾರಿಯನ್ನು ಮೈಸೂರು ವಿಭಾಗದ ಆಹಾರ ಮತ್ತು ಸರಬರಾಜು ಇಲಾಖೆಗೆ ವಹಿಸಲಾಗಿದೆ. ಇಲಾಖೆಯ ಸಿಬ್ಬಂದಿ ಎರಡು ತಿಂಗಳುಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಅದರೆ ಒಂದೇ ಒಂದು ರೈತರ ನೋಂದಣಿ ಆಗದ ಹಿನ್ನೆಲೆಯಲ್ಲಿ ಇದೀಗ ಸಿಬ್ಬಂದಿ ಮರಳಿ ಮೈಸೂರಿಗೆ ತೆರಳಿದ್ದಾರೆ. ಕೇಂದ್ರದಲ್ಲಿ ಸಿಬ್ಬಂದಿಯೂ ಇಲ್ಲ, ಇತ್ತ ಕೇಂದ್ರ ಇರುವ ಬಗ್ಗೆ ಯಾವದೇ ನಾಮಫಲಕವಾಗಲೀ, ಸೂಚನಾ ಫಲಕವೂ ಇಲ್ಲವಾಗಿದೆ..!

ಕಡಿಮೆ ಬೆಲೆ..!

ಭತ್ತ ಖರೀದಿ ಕೇಂದ್ರದಲ್ಲಿ ಸರಕಾರ ನಿಗದಿಪಡಿಸಿದಂತೆ ರೈತರಿಗೆ ಒಂದು ಕ್ವಿಂಟಾಲ್ ಭತ್ತಕ್ಕೆ ರೂ. ೨೩೮೬ ನೀಡಲಾಗುತ್ತದೆ. ಅದೂ ಕೂಡ ರೈತರೇ ಭತ್ತವನ್ನು ಕೊಂಡೊಯ್ದು ಕೇಂದ್ರಕ್ಕೆ ನೀಡಬೇಕು. ಆದರೆ, ಖಾಸಗಿ ವ್ಯಾಪಾರಿಗಳು ರೈತರ ಭತ್ತದ ಕಣಕ್ಕೆ ತೆರಳಿ ರೂ. ೨೪೦೦ರಿಂದ ರೂ. ೨೫೦೦ ನೀಡಿ ಖರೀದಿಸುತ್ತಾರೆ. ಇದರೊಂದಿಗೆ ರೈತರು ತಮ್ಮ ಅಗತ್ಯತೆಗೆ ಇರಿಸಿಕೊಂಡು ಉಳಿದ ಹುಲ್ಲನ್ನು ನೀಡಿದರೂ ಖರೀದಿಸುತ್ತಾರೆ. ಹಾಗಾಗಿ ಯಾರೂ ಕೂಡ ಭತ್ತದ ಖರೀದಿ ಕೇಂದ್ರದ ಕಡೆಗೆ ಮುಖ ಮಾಡುತ್ತಿಲ್ಲ..!

ಸರಕಾರದ ಭತ್ತ ಹಾಗೂ ರಾಗಿ ಖರೀದಿಗಾಗಿ ಕೇಂದ್ರಗಳನ್ನು ತೆರೆದಿದೆಯಾದರೂ ಸರಕಾರದ ನಿಯಮ ಹಾಗೂ ಕಡಿಮೆ ಬೆಲೆ ನಿಗದಿ ಮಾಡಿರುವ ಹಿನ್ನೆಲೆಯಲ್ಲಿ ಇದೀಗ ಖರೀದಿ ಕೇಂದ್ರಗಳು ಪಳೆಯುಳಿಕೆಯಂತೆ ಆಗಿದೆ. ಉತ್ತಮ ಬೆಲೆಯೊಂದಿಗೆ ನಿಯಮಗಳನ್ನು ಸಡಿಲಿಸಿ ಸಕಾಲದಲ್ಲಿ ರೈತರಿಗೆ ಹಣ ಲಭಿಸುವಂತೆ ಮಾಡಿದಲ್ಲಿ ಈ ಕೇಂದ್ರಗಳಿಗೆ ಒಂದು ಅರ್ಥ ಬರಬಹುದೇನೋ..!?

- ಕೆ.ಕೆ. ನಾಗರಾಜಶೆಟ್ಟಿ.