*ಗೋಣಿಕೊಪ್ಪ, ಜ. ೨೨: ಪ್ರಗತಿ ಆಟೋ ಚಾಲಕರ ಮತ್ತು ಮಾಲೀಕರ ಸಂಘ ವತಿಯಿಂದ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಆಟೋ ಚಾಲಕರಿಗೆ ಕಾರ್ಮಿಕ ಕಾರ್ಡ್ ವಿತರಣೆ ಮಾಡಲಾಯಿತು.
ಗೋಣಿಕೊಪ್ಪ ಪಂಚಾಯಿತಿ ಹಳೆ ಕಟ್ಟಡ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ೯೦ಕ್ಕೂ ಹೆಚ್ಚು ಆಟೋ ಚಾಲಕರಿಗೆ ವಿತರಣೆ ನಡೆಯಿತು.
ಮಡಿಕೇರಿ ಕಾರ್ಮಿಕ ಇಲಾಖೆ ಅಧಿಕಾರಿ ವಾಣಿ ಮಾತನಾಡಿ, ಪ್ರಧಾನಮಂತ್ರಿ ಶ್ರಮಯೋಗಿ ಮಾನ್ಧನ್ ಪಿಂಚಣಿ ಸವಲತ್ತು ಪಡೆಯಲು ೪೦ ವರ್ಷದ ಒಳಗಿನವರು ಅರ್ಹರಾಗಿರುತ್ತಾರೆ. ಜೊತೆಗೆ ಮೋಟರು ಸಾರಿಗೆ ಸಂಬAಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳ ಸದುಪಯೋಗಕ್ಕೆ ಆಟೋ ಚಾಲಕರು ಗಮನ ಹರಿಸಬೇಕು ಎಂದು ಹೇಳಿದರು. ಕಾರ್ಮಿಕ ಇಲಾಖೆಯಲ್ಲಿ ಸಿಗುವ ಹಲವಾರು ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಸಾಹಿತಿ ಜಗದೀಶ್ ಜೋಡುಬೀಟಿ ಮಾತನಾಡಿ, ಆಟೋ ಚಾಲಕರು ಸಾಮಾಜಿಕ ಬದ್ಧತೆಯೊಂದಿಗೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನಾಡಿನ ನೆಲ- ಜಲ, ಸಂಸ್ಕೃತಿ, ಭಾಷೆಗಳ ಸಮೃದ್ಧಿ ಮತ್ತು ಮಹಿಳೆ, ಮಕ್ಕಳ, ವೃದ್ಧರ, ಅನಾರೋಗ್ಯ ಪೀಡಿತರ ಸುರಕ್ಷತೆಯೆಡೆಯ ಜವಾಬ್ದಾರಿಯು ಆಟೋ ಚಾಲಕರಾದ್ದಾಗಿದೆ ಎಂದರು.
ಪ್ರಗತಿ ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಸಲಹೆಯೊಂದಿಗೆ ಸಂಘದ ಅಧ್ಯಕ್ಷ ಡಾಡು ಜೋಸೆಫ್ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷ ವಿನೋದ್, ಕಾರ್ಯದರ್ಶಿ ಸನ್ನು ಕಾರ್ಯಪ್ಪ, ಖಜಾಂಚಿ ಪ್ರಕಾಸ್, ನಿಕಟಪೂರ್ವ ಅಧ್ಯಕ್ಷ ಭೀಮಯ್ಯ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ, ಪೊನ್ನಂಪೇಟೆ ಕಾರ್ಮಿಕ ಇಲಾಖೆ ಅಧಿಕಾರಿ ಕಾವ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಹಾಜರಿದ್ದರು.