ವೀರಾಜಪೇಟೆ, ಜ. ೨೨: ವೀರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ರಾಜ್ಯದ ಮುಖ್ಯಮಂತ್ರಿಗಳು ರೂ. ೨೦ ಕೋಟಿ ಅನುದಾನ ನೀಡಿದ್ದಾರೆ. ಅದರಲ್ಲಿ ವಿವಿಧ ಭಾಗಗಳಲ್ಲಿ ಕಾಮಗಾರಿಗಳು ನಡೆಯುತ್ತಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಪುರಸಭಾ ವ್ಯಾಪ್ತಿಯ ಶಿವಕೇರಿ ವಾರ್ಡ್ನಲ್ಲಿ ರೂ. ೨೭ ಲಕ್ಷ ಅನುದಾನದಲ್ಲಿ ಮುಖ್ಯ ರಸ್ತೆಯಿಂದ ಶ್ರೀ ಮಾರಿಯಮ್ಮ ದೇವಸ್ಥಾನಕ್ಕೆ ನೂತನ ಕಾಂಕ್ರೀಟ್ ರಸ್ತೆ, ದುರ್ಗಿ ವಿಷ್ಣು ದೇವಸ್ಥಾನ ಬಳಿಯಿಂದ ಸಾರ್ವಜನಿಕ ರಸ್ತೆ ಅಭಿವೃದ್ಧಿ ಮತ್ತು ಇಲ್ಲಿನ ರುದ್ರಭೂಮಿಗೆ ರಸ್ತೆ ನಿರ್ಮಾಣ ಹಾಗೂ ಚರಂಡಿ ನಿರ್ಮಾಣ ಎಲ್ಲಾ ನೂತನ ರಸ್ತೆಗಳನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದ ಬಳಿಕ ಮಾರಿಗುಡಿ ಆವರಣದಲ್ಲಿ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಪೊನ್ನಣ್ಣ, ಕಾಂಗ್ರೆಸ್ ಪಕ್ಷ ಹಿಂದಿನಿAದಲೂ ಬಡವರು ಹಿಂದುಳಿದ ಜನಾಂಗದ ಏಳಿಗೆಗೆ ಕೆಲಸ ಮಾಡುತ್ತಿದೆ. ಪುರಸಭೆಗೆ ಬಂದಿರುವ ರೂ. ೨೦ ಕೋಟಿ ಅನುದಾನದಲ್ಲಿ ಎಲ್ಲಾ ವಾರ್ಡ್ಗಲ್ಲಿ ಕಾಮಗಾರಿ ನಡೆಸುತ್ತಿದ್ದು, ಕೆಲವು ಪೂರ್ಣಗೊಂಡಿದ್ದು ಇನ್ನು ಕೆಲವು ಕಾಮಗಾರಿ ಪ್ರಗತಿಯಲ್ಲಿದೆ. ಈಗ ಉಳಿದಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಹಂತಹAತವಾಗಿ ಮಾಡಲಾಗುವುದು ಎಂದು ಶಾಸಕರು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಸತೀಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಶಿವಕೇರಿಗೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಅಭಾವಿರುವುದರಿಂದ ತೆರೆದ ಬಾವಿಯನ್ನು ನಿರ್ಮಿಸಿಕೊಡುವಂತೆ ಸ್ಥಳೀಯ ನಿವಾಸಿಗಳು ಶಾಸಕ ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವಿಕರಿಸಿದ ಅವರು ಇದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ದಿನದಲ್ಲಿ ತೆರೆದ ಬಾವಿ ಕಾಮಗಾರಿ ಮಾಡಿಕೊಡುವ ಭರವಸೆ ನೀಡಿದರು. ರಸ್ತೆ ಉದ್ಘಾಟನೆ ವೇಳೆ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿ, ಗೌರವಿಸಿದರು. ಬಳಿಕ ಹೂ ಮಳೆಗರೆದು, ನೂತನ ರಸ್ತೆಯುದ್ದಕ್ಕೂ ಹೂವು ಹಾಕುತ್ತಾ ಸಭಾಂಗಣದವರೆಗೆ ಕರೆತಂದರು.
ಇದೇ ಸಂದರ್ಭ ವೇದಿಕೆಯಲ್ಲಿ ಸ್ಥಳೀಯರು ಸನ್ಮಾನಿಸಿದರು.ವೇದಿಕೆಯಲ್ಲಿ ಸ್ಥಳಿಯ ವಾರ್ಡ್ ಮಾಜಿ ಸದಸ್ಯೆ ಪೂರ್ಣಿಮಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ರಂಜಿ ಪೂಣಚ್ಚ, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಪಿ.ಎ. ಹನೀಫ್, ದಲಿತ ಸಮಿತಿ ಮುಖಂಡರಾದ ಗಾಯತ್ರಿ ನರಸಿಂಹ, ಹೆಚ್.ಜಿ. ಗೋಪಾಲ, ಗ್ರಾಮದ ಹಿರಿಯರಾದ ವಿಠಲ, ಸಾಮಾಜಿಕ ಜಾಲತಾಣದ ಸೂರಜ್, ರಾಕೇಶ್, ಸಾಗರ್, ಶ್ರೀನಿವಾಸ್, ಸಚಿನ್, ಪುರಸಭೆ ಮುಖ್ಯಧಿಕಾರಿ ಪಿ.ಕೆ. ನಾಚಪ್ಪ, ಅಭಿಯಂತರ ಹೇಮಕುಮಾರ್, ಮಾಜಿ ಸದಸ್ಯ ಅತೀಫ್ ಮನ್ನ, ಎ.ವಿ. ಮಂಜುನಾಥ್ ಉಪಸ್ಥಿತರಿದ್ದರು.