ಮಡಿಕೇರಿ, ಜ. ೨೨: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ದತ್ತಿ ಕಾರ್ಯಕ್ರಮಗಳ ಸಂಖ್ಯೆ ೩೭ಕ್ಕೆ ಏರಿಕೆಯಾಗಿದೆ ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ್ ಕಾಮತ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ದಾನಿಗಳ ಮೂಲಕ ಸ್ಥಾಪನೆಗೊಂಡ ೧೯ ದತ್ತಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇದೀಗ ಅದು ೩೭ಕ್ಕೆ ಏರಿಕೆಯಾಗಿದೆ. ಮತ್ತಷ್ಟು ದಾನಿಗಳು ಮುಂದೆ ಬಂದು ದತ್ತಿ ಸ್ಥಾಪಿಸುವಂತೆ ಮನವಿ ಮಾಡಿದರು.
೨ ಸಾವಿರವಿದ್ದ ಸದಸ್ಯತ್ವ ಸಂಖ್ಯೆಯನ್ನು ೩,೫೦೦ಕ್ಕೆ ಹೆಚ್ಚಿಸಲಾಗಿದೆ. ಶಾಲಾ, ಕಾಲೇಜುಗಳಲ್ಲಿ ದತ್ತಿ ಉಪನ್ಯಾಸದ ಮೂಲಕ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿಯ ಬಗ್ಗೆ ಒಲವು ಮೂಡಿಸುವ ಕೆಲಸವಾಗುತ್ತಿದೆ. ಜೊತೆಗೆ ಸುದರ್ಶನ ವೃತ್ತದ ಬಳಿ ೬೦ ಸೆಂಟ್ ಜಾಗದಲ್ಲಿ ಭವನ ನಿರ್ಮಾಣಕ್ಕೆ ಸಂಬAಧಿಸಿದAತೆ ಈಗಾಗಲೇ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಸರಕಾರವೂ ಅಗತ್ಯ ಅನುದಾನ ನೀಡುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಫೆ. ೯ಕ್ಕೆ ಐಗೂರಿನಲ್ಲಿ ೯ನೇ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ, ನಿವೃತ್ತ ಶಿಕ್ಷಕಿ ಜಲಜಾ ಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ. ೧೧ ಉಪಸಮಿತಿಗಳನ್ನು ರಚಿಸಲಾಗಿದೆ. ಫೆ. ೧೪ ರಂದು ಡಾ. ಎಂ.ಜಿ. ನಾಗರಾಜ್, ಸುಲೋಚನ ಸ್ಥಾಪಿಸಿರುವ ದತ್ತಿ ಅಡಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ದೇವರಕಾಡು ಸಂರಕ್ಷಣೆ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದರು.
ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ದತ್ತಿ ದಾನಿಗಳ ಆಶಯದಂತೆ ಕಾರ್ಯಕ್ರಮ ನಡೆಯುತ್ತಿದೆ. ೩೭ ದತ್ತಿಗಳ ಪೈಕಿ ಜಿಲ್ಲಾ ಸಮಿತಿಗೆ ೧೦, ಪೊನ್ನಂಪೇಟೆ, ಮಡಿಕೇರಿ, ವೀರಾಜಪೇಟೆ ತಾಲೂಕು ಸಮಿತಿಗೆ ತಲಾ ೫, ಕುಶಾಲನಗರ, ಸೋಮವಾರಪೇಟೆ ತಾಲೂಕು ಸಮಿತಿಗಳಿಗೆ ತಲಾ ೬ ದತ್ತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪದವಿ ಕಾಲೇಜು, ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ದೇಶ ಭಕ್ತಿ ಗೀತೆ, ಕಥೆ, ಪ್ರಬಂಧ, ಕವನ ಬರೆಯುವ ಸ್ಪರ್ಧೆ, ನಾಟಕ, ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಗಿದೆ. ಅದೇ ರೀತಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ, ಉಪನ್ಯಾಸ ಕಾರ್ಯಕ್ರಗಳನ್ನು ಆಯೋಜಿಸಲಾಗಿದೆ. ಜಿಲ್ಲೆಯ ಮಹಿಳಾ ಬರಹಗಾರ್ತಿಯರ ಕೃತಿಗಳನ್ನು ಆಹ್ವಾನಿಸಿ ಉತ್ತಮ ಕೃತಿಗೆ ಗೌರಮ್ಮ ದತ್ತಿ ಪ್ರಶಸ್ತಿ ನೀಡಲಾಗಿದೆ. ಒಟ್ಟು ೨೩ ಮಂದಿ ಇದುವರೆಗೂ ಪ್ರಶಸ್ತಿ ಸ್ವೀಕರಿಸಿದ್ದಾರೆ ಎಂದು ವಿವರಿಸಿದರು.
ವಿಜಯ ವಿಷ್ಣುಭಟ್ ಅವರ ಆಶಯದಂತೆ ಮಹಿಳಾ ಬರಹಗಾರರ ಕೃತಿಗೆ ಪ್ರಶಸ್ತಿ, ಬಿ.ಎಸ್. ಗೋಪಾಲ್ಕೃಷ್ಣ ಅವರ ದತ್ತಿಯ ಆಶಯದಂತೆ ಪುರುಷ ಸಾಹಿತಿಗಳು ರಚಿಸಿದ ಕೃತಿಗಳಿಗೆ ಪ್ರಶಸ್ತಿ ನೀಡುತ್ತ ಬರಲಾಗುತ್ತಿದೆ. ಮಡಿಕೇರಿಯಲ್ಲಿ ನಡೆದ ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ನಾ. ಡಿಸೋಜಾ ಅವರ ಹೆಸರಿನಲ್ಲಿ ಕ.ಸಾ.ಪ.ದಿಂದ ರೂ. ೨ ಲಕ್ಷದ ದತ್ತಿ ಸ್ಥಾಪಿಸಲಾಗಿದೆ. ಇದರೊಂದಿಗೆ ಗೌರಮ್ಮ ದತ್ತಿ ೧.೨೯ ಲಕ್ಷ, ಶಕ್ತಿ ದಿನಪತ್ರಿಕೆಯ ಸ್ಥಾಪಕ ಸಂಪಾದಕರಾದ ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಹೆಸರಿನಲ್ಲಿ ರೂ. ೧ ಲಕ್ಷ, ದಾವಣಗೆರೆಯ ದಿ. ಮಾಗನೂರು ಬಸಪ್ಪ ಹೆಸರಿನಲ್ಲಿ ರೂ. ೧ ಲಕ್ಷ, ಸುಲೋಚನ ಮತ್ತು ಡಾ. ಎಂ.ಜಿ. ನಾಗರಾಜು ದಂಪತಿ ಹೆಸರಿನಲ್ಲಿ ರೂ. ೧ ಲಕ್ಷ, ಗಂಗಮ್ಮ, ರಾಚಪ್ಪ ಹೆಸರಿನಲ್ಲಿ ೨ ಲಕ್ಷ, ಕೈಬುಲೀರ ಬೋಪಯ್ಯ ದತ್ತಿ ೧.೫೦ ಲಕ್ಷ, ಡಾ. ರಘುರಾಮ ಅಶ್ರಣ್ಣ, ಲೀಲಾ ಅಶ್ರಣ್ಣ ದತ್ತಿ ರೂ. ೭೨ ಸಾವಿರ, ೫೦ ಸಾವಿರ ಮೊತ್ತದ ವಿವಿಧ ಗಣ್ಯರ ಹೆಸರಿನಲ್ಲಿ ೧೩ ದತ್ತಿ, ರೂ. ೩೦ ರಿಂದ ೩೪ ಸಾವಿರದವರೆಗಿನ ೬ ದತ್ತಿ, ೨೫ ಸಾವಿರ ಮೊತ್ತದ ೩ ದತ್ತಿ, ೧೯ ಸಾವಿರ ಮೊತ್ತದ ೧ ದತ್ತಿ, ೧೩ ಸಾವಿರ ಮೊತ್ತದ ೭ ದತ್ತಿಗಳು ಸ್ಥಾಪಿತಗೊಂಡಿವೆ ಎಂದು ಮಾಹಿತಿ ನೀಡಿದರು.
೩೭ ದತ್ತಿಗಳ ಬಡ್ಡಿ ಹಣದಿಂದ ಆಯಾದತ್ತಿಗಳ ಆಶಯಕ್ಕೆ ತಕ್ಕಂತೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಒಟ್ಟು ೧,೦೬,೭೮೭ ಬಡ್ಡಿ ಹಣ ಸಿಗಲಿದ್ದು, ಈ ಮೂಲಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಗೋಷ್ಠಿಯಲ್ಲಿ ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ಮುನೀರ್ ಅಹಮ್ಮದ್, ಪುದಿಯನೆರವನ ರೇವತಿ ರಮೇಶ್, ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ಸಂಘಟನಾ ಕಾರ್ಯದರ್ಶಿ ವಾಸು ರೈ ಹಾಜರಿದ್ದರು.