ಕಣಿವೆ, ಜ. ೨೩: ಆನೆಚೌಕೂರು ಅರಣ್ಯದ ಹೆದ್ದಾರಿಯಲ್ಲಿ ಭಲೇ ಭೀಮನ ಗಾತ್ರದ ಹುಲಿಯೊಂದು ಕುಶಾಲನಗರದ ದಂಪತಿಯ ಕಾರಿಗೆ ಅಡ್ಡಲಾಗಿ ಆಗಮಿಸಿ ಆತಂಕ ಮೂಡಿಸಿದ ಪ್ರಸಂಗ ಗುರುವಾರ ರಾತ್ರಿ ನಡೆದಿದೆ.
ಕುಶಾಲನಗರದ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಪ್ರಾಧ್ಯಾಪಕ ರಾಗಿರುವ ಎಸ್.ಸುಷ್ಮಾ ಹಾಗೂ ವಿನಯ್ ಕುಮಾರ್ ದಂಪತಿ ಗೋಣಿಕೊಪ್ಪದಿಂದ ಆನೆಚೌಕೂರು ಮಾರ್ಗವಾಗಿ ಕುಶಾಲನಗರಕ್ಕೆ ಧಾವಿಸುವ ಸಂದರ್ಭ ಆನೆಚೌಕೂರು - ತಿತಿಮತಿ ಮಾರ್ಗದ ಹೆದ್ದಾರಿಯಲ್ಲಿ ಹುಲಿ ಪ್ರತ್ಯಕ್ಷಗೊಂಡಿದೆ.
ತಕ್ಷಣವೇ ಆತಂಕ ಹಾಗೂ ಭಯದ ನಡುವೆಯೇ ಕಾರಿನ ಮುಂಬದಿಯ ಹೆಡ್ ಲೈಟುಗಳ ಸಹಾಯದಿಂದ ೧೮ ಸೆಕೆಂಡ್ ಗಳ ವಿಡಿಯೋ ಮಾಡಿದ್ದಾಗಿ ವಿನಯ್ “ಶಕ್ತಿ''ಗೆ ವಿವರಿಸಿದರು. ಭಯಾನಕವಾಗಿ ಕಂಡ ಹುಲಿ ಯಾವುದೋ ಪ್ರಾಣಿಯನ್ನು ಸರಿಯಾಗಿಯೇ ಬೇಟೆಯಾಡಿ ಹೊಟ್ಟೆ ತುಂಬಿಸಿಕೊAಡು ಸ್ವಸ್ಥಾನಕ್ಕೆ ಮರಳುತ್ತಿದ್ದಿರಬಹುದು. ಕಾರಿನ ಲೈಟು ಅದರ ಕಣ್ಣಿಗೆ ಬಿದ್ದೊಡನೆ ಒಮ್ಮೆ ನಮ್ಮತ್ತ ನೋಡಿತಾದರೂ ಅದೃಷ್ಟವಶಾತ್ ರಸ್ತೆ ದಾಟಿ ನಮಗೆ ದಾರಿ ಮಾಡಿಕೊಟ್ಟಿತು. ಆತಂಕವನ್ನು ಕಡಿಮೆ ಮಾಡಿತು ಎನ್ನುತ್ತಾರೆ ವಿನಯ್ ಹಾಗೂ ಸುಷ್ಮಾ ದಂಪತಿ.