ಚೆಟ್ಟಳ್ಳಿ, ಜ. ೨೩: ತುರ್ತು ಸಂದರ್ಭದಲ್ಲಿ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಸಮರ್ಪಕ ವೈದ್ಯಕೀಯ ಸೇವೆ ಲಭ್ಯವಾಗದೆ ಸಾರ್ವಜನಿಕರು ಪರದಾಡಿದ ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಜನವರಿ ೨೨ ರಂದು ರಾತ್ರಿ ವೇಳೆ ತುರ್ತು ಚಿಕಿತ್ಸೆಗೆ ತೆರಳಿದ ಸಂದರ್ಭ ಆಸ್ಪತ್ರೆ ಮುಚ್ಚಿರುವ ವೀಡಿಯೋ ವೈರಲ್ ಆದ ಬೆನ್ನಲ್ಲೇ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ತಕ್ಷಣ ಸ್ಪಂದಿಸಿ, ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಶಾಸಕರ ಸೂಚನೆಯಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದು ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಸಭೆ ನಡೆಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿಂಧೂ ರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್, ಆಡಳಿತ ವೈದ್ಯಾಧಿಕಾರಿ ಡಾ. ಮಧುಸೂದನ್, ಜಿಲ್ಲಾ ಕೆಡಿಪಿ ಸದಸ್ಯೆ ಸುನಿತಾ ಮಂಜುನಾಥ್, ಪಂಚಾಯಿತಿ ಸದಸ್ಯರಾದ ತೀರ್ಥಕುಮಾರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಜುಬೇರ್ ಹಾಗೂ ಮೋಹಿನಿ ಕೆ.ಟಿ., ಪಂಚಾಯಿತಿ ಮಾಜಿ ಸದಸ್ಯ ಮೊಹಮ್ಮದ್ ರಫಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಕೆಡಿಪಿ ಸದಸ್ಯೆ ಸುನಿತಾ ಮಂಜುನಾಥ್, ಆಸ್ಪತ್ರೆಯ ಆವರಣ ಹಾಗೂ ಸಿಬ್ಬಂದಿ ವಸತಿ ಗೃಹಗಳ ಸುತ್ತ ಅನಾಮಧೇಯ ವ್ಯಕ್ತಿಗಳ ಸಂಚಾರ ಹೆಚ್ಚಿರುವುದರಿಂದ ರಾತ್ರಿ ಪಾಳೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಭಯ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ರಾತ್ರಿ ವೇಳೆಯ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ವಿವರಿಸಿದರು.

ಆಡಳಿತ ವೈದ್ಯಾಧಿಕಾರಿ ಡಾ. ಮಧುಸೂದನ್ ಮಾತನಾಡಿ, ಹಿಂದೆ ಆಸ್ಪತ್ರೆಯಲ್ಲಿ ಮೂರು ಶುಶ್ರೂಷಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಒಬ್ಬರು ಹೆರಿಗೆ ರಜೆಗೆ ತೆರಳಿದ್ದು, ಮತ್ತೊಬ್ಬರು ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿರುವುದರಿಂದ ಪ್ರಸ್ತುತ ಒಬ್ಬರೇ ಶುಶ್ರೂಷಕಿ ಕರ್ತವ್ಯದಲ್ಲಿದ್ದಾರೆ. ಈ ಕಾರಣದಿಂದ ರಾತ್ರಿ ಸೇವೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಕೂಡಲೇ ಪ್ರತೀಕ್ಷಾ ಪಟ್ಟಿಯಲ್ಲಿರುವ ಶುಶ್ರೂಷಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸೂಚಿಸಿದರು.

ಇದಲ್ಲದೆ ಆಸ್ಪತ್ರೆಯ ಆವರಣದಲ್ಲಿ ಬೆಳೆದಿದ್ದ ಕಾಡು ಗಿಡಗಳನ್ನು ತೆರವುಗೊಳಿಸಲಾಗಿದ್ದು, ರಾತ್ರಿಯ ವೇಳೆ ಪೊಲೀಸ್ ಬೀಟ್ ವ್ಯವಸ್ಥೆ ಮಾಡಲು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಕಾರ್ಯ ನಿರ್ವಹಿಸದ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಬೀದಿ ದೀಪಗಳನ್ನು ಎಬಿಆರ್‌ಕೆ ಅನುದಾನದಡಿ ತಕ್ಷಣ ದುರಸ್ತಿಗೊಳಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು.

ಆಸ್ಪತ್ರೆಯಲ್ಲಿನ ವಿದ್ಯುತ್ ಮೀಟರ್ ಸಮಸ್ಯೆ, ಜನರೇಟರ್ ವ್ಯವಸ್ಥೆ ಹಾಗೂ ಸಿಬ್ಬಂದಿಗೆ ಅಗತ್ಯವಾದ ವಸತಿ ಗೃಹಗಳ ದುರಸ್ತಿ ಕುರಿತು ಚರ್ಚಿಸಲಾಗಿ, ಕನಿಷ್ಟ ಮೂರು ವಸತಿ ಗೃಹಗಳನ್ನು ಜಿಲ್ಲಾ ಪಂಚಾಯಿತಿ ಅನುದಾನದಡಿ ತುರ್ತಾಗಿ ದುರಸ್ತಿ ಮಾಡುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಭರವಸೆ ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಸದಸ್ಯರು ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಒಂದು ವಾರದೊಳಗೆ ಸರಿಪಡಿಸಿ, ರಾತ್ರಿ ಸೇವೆಯನ್ನು ಪುನರಾರಂಭಿಸುವAತೆ ಆಡಳಿತ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದAತೆ ತುರ್ತು ಸಂದರ್ಭಗಳಲ್ಲಿ ಸಮರ್ಪಕ ವೈದ್ಯಕೀಯ ಸೇವೆ ಒದಗಿಸಲು ಅಗತ್ಯ ಕ್ರಮಗಳನ್ನು ತಕ್ಷಣ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

- ಪುತ್ತರಿರ ಕರುಣ್ ಕಾಳಯ್ಯ