ಮಡಿಕೇರಿ, ಜ. ೨೩: ಬಾಡಗರಕೇರಿ ಪೊರಾಡ್ ಗ್ರಾಮದಲ್ಲಿರುವ ಅಣ್ಣೀರ ಕುಟುಂಬಸ್ಥರು ಸೇರಿ ಶಿಥಿಲಾವಸ್ಥೆಯಲ್ಲಿದ್ದ ಐನ್‌ಮನೆಯನ್ನು ಪುನರ್ ನಿರ್ಮಾಣ ಮಾಡುವ ಮೂಲಕ ಹಳೆಯ ಸಂಸ್ಕೃತಿಯ ಉಳಿಕೆ - ಪರಿಪಾಲನೆಗೆ ಮುಂದಾಗಿದ್ದಾರೆ. ರೂ. ೨೯ ಲಕ್ಷ ವೆಚ್ಚದಲ್ಲಿ ಹಳೆಯ ಶೈಲಿಯಲ್ಲೇ ನವೀಕರಣ ಮಾಡಲಾಗಿದ್ದು, ಇತ್ತೀಚೆಗೆ ಪ್ರವೇಶ ಕಾರ್ಯಕ್ರಮ ನಡೆದಿದ್ದು, ಶಾಸಕ ಎ.ಎಸ್. ಪೊನ್ನಣ್ಣ ಅವರು ಭಾಗಿಯಾಗಿದ್ದರು. ಅತಿಥಿಗಳಾಗಿದ್ದ ಶಾಸಕ ಪೊನ್ನಣ್ಣ ಅವರು ಮಾತನಾಡಿ, ಐನ್‌ಮನೆ ಹಿಂದಿನ ಕಾಲದಲ್ಲಿ ಪೂರ್ವಿಕರ ವೈಭವವನ್ನು ಸಾರುತ್ತದೆ. ಐನ್‌ಮನೆಯನ್ನು ಇದೇ ವೈಭವಯುತವಾಗಿ ಕಾಪಾಡಿಕೊಂಡು ಬರುವುದು ನಮ್ಮೆಲ್ಲರ ಧರ್ಮ. ಹಾಗೆಯೇ ಐನ್‌ಮನೆಗಳ ರಕ್ಷಣೆ ಆಗಬೇಕು. ಈ ಮೂಲಕ ಸಂಸ್ಕೃತಿಯನ್ನು ಉಳಿಸಬೇಕು ಎಂದು ಅಭಿಪ್ರಾಯಪಟ್ಟರು.
ಶಾಸಕರು ರೂ. ೩.೫೦ ಲಕ್ಷ ಅನುದಾನದೊಂದಿಗೆ ಸಹಕಾರ ನೀಡಿದ್ದು, ಕುಟುಂಬ - ತವರು ಮನೆಯವರಿಂದ ಕ್ರೋಢೀಕರಿಸಿ ರೂ. ೨೯ ಲಕ್ಷದಲ್ಲಿ ಪುನರ್ ನಿರ್ಮಾಣ ಮಾಡಿರುವ ಐನ್‌ಮನೆಯಲ್ಲಿ ದಾನಿಗಳ ನಾಮಫಲಕ ಅನಾವರಣ ನಂತರ ನಡೆದ ಸಂತೋಷಕೂಟದಲ್ಲಿ ಅವರು ಮಾತನಾಡಿದರು. ಸಣ್ಣ ಜನಾಂಗವಾಗಿ ದೇಶಕ್ಕೆ ಎಷ್ಟೇ ದೊಡ್ಡ ಕೊಡುಗೆ ನೀಡಿದ್ದರೂ, ಈಗಿನ ಸನ್ನಿವೇಶದಲ್ಲಿ ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಜನಸಂಖ್ಯೆ ಆಧಾರದಲ್ಲಿ ಗುರುತಿಸಲಾಗುತ್ತದೆ. ಯಾವ ಜನಾಂಗ ಜಾಸ್ತಿ ಸಂಖ್ಯೆಯಲ್ಲಿ ಇರುತ್ತದೆಯೋ ಅವರ ಪ್ರಾಬಲ್ಯವಿರುತ್ತದೆ. ಆದರೂ ನಾವು ದೇಶಕ್ಕೆ, ನಾಡಿಗೆ ಎಲ್ಲಾ ಕ್ಷೇತ್ರಕ್ಕೂ ನಮ್ಮದೇ ಆದಂತಹ ಕೊಡುಗೆ ನೀಡಿದ್ದೇವೆ. ರಾಜಕೀಯ ಕ್ಷೇತ್ರದಲ್ಲೂ ಸಹ ಕೊಡವ ಜನಾಂಗ ಮುತ್ಸದ್ದಿ ರಾಜಕಾರಣಿಗಳನ್ನು ನೀಡಿದ್ದು ಕೊಡವ ರಾಜಕಾರಣಿಗಳನ್ನು ಬಿಟ್ಟು ರಾಜ್ಯದ ರಾಜಕೀಯ ಚರಿತ್ರೆ ಅಪರಿಪೂರ್ಣವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮೊದಲು ಕುಟುಂಬದ ಹಿರಿಯರಾದ ಜೂಬ ಸುಬ್ಬಯ್ಯ ಮತ್ತು ಅಕ್ಕಚ್ಚಿ ಸುಬ್ಬಯ್ಯ ಅವರು ತಾವು ಕೊಡುಗೆ ನೀಡಿದ ಐನ್‌ಮನೆಯ ಮುಖ್ಯ ದ್ವಾರವನ್ನು ಉದ್ಘಾಟಿಸಿದರು. ಈ ಸಂದರ್ಭ ಒಡಿಕತ್ತಿ ನೀಡಿ ಅಣ್ಣೀರ ಕುಟುಂಬದಿAದ ಶಾಸಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಟುಂಬದ ಅಧ್ಯಕ್ಷ ಲವ ಅಯ್ಯಪ್ಪ ವಹಿಸಿದ್ದರು. ವೇದಿಕೆಯಲ್ಲಿ ಊರುತಕ್ಕರಾದ ಅಣ್ಣೀರ ಕಾಶಿ, ಶ್ರೀ ಮೃತ್ಯುಂಜಯ ದೇವಸ್ಥಾನದ ದೇವತಕ್ಕರಾದ ಅಣ್ಣೀರ ದಾದ ಗಣಪತಿ ಹಾಗೂ ಕುಟುಂಬದ ಹಿರಿಯರಾದ ಲಲಿತಾ ಮುತ್ತಣ್ಣ, ಪಾರ್ವತಿ ಗಣಪತಿ, ಕೃಷ್ಣ ಉತ್ತಪ್ಪ, ಕಟ್ಟಿ ಗಣೇಶ್, ಪ್ರಭು ಪೂವಯ್ಯ ಹಾಗೂ ಕುಟುಂಬದ ಉಪಾಧ್ಯಕ್ಷ ವಸಂತ ತಿಮ್ಮಯ್ಯ, ಕಾರ್ಯದರ್ಶಿ ಹರೀಶ್ ಮಾದಪ್ಪ, ಕಾರ್ಯಕಾರಿ ಸಮಿತಿಯ ಎ.ಕೆ. ಪೆಮ್ಮಯ್ಯ, ಎ.ಎಂ. ಲೋಕೇಶ್, ಎ.ಎಂ. ಧನು ಪೂಣಚ್ಚ, ಎ.ಎಂ. ದಿನೇಶ್, ಎ.ಕೆ. ಮಣಿ, ಮಧು ಮಂದಯ್ಯ, ಲಿತಿನ್ ಪೊನ್ನಣ್ಣ, ರೋಹಿಣಿ ಉತ್ತಪ್ಪ, ಜಾನಕಿ ಲೋಕೇಶ್, ರೂಪ ಪೆಮ್ಮಯ್ಯ ಹಾಜರಿದ್ದರು.