ಶ್ರೀಮಂಗಲ, ಜ. ೨೩: "ಕೊಡವ ಟಗ್ ಆಫ್ ವಾರ್ ಅಕಾಡೆಮಿಯ" ಆಶ್ರಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೊಡವ ಕುಟುಂಬಗಳ ನಡುವೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಕೊಡವ ಕೌಟುಂಬಿಕ "ಕೇರ್ ಬಲಿ ನಮ್ಮೆ"ಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಕೊಡವ ಟಗ್ ಆಫ್ ವಾರ್ ಅಕಾಡೆಮಿ ಪದಾಧಿಕಾರಿಗಳ ವಿಶೇಷ ಸಭೆಯನ್ನು ಅಕಾಡೆಮಿಯ ಸ್ಥಾಪಕ ಅಧ್ಯಕ್ಷ ಪೊನ್ನೊಲತಂಡ ಕಿರಣ್ ಪೊನ್ನಪ್ಪರವರ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪ ಸ್ಪೈಸ್ ರೇಕ್ ಹೊಟೇಲ್ ಸಭಾಂಗಣದಲ್ಲಿ ನಡೆಸಲಾಯಿತು.

ಸಭೆಯಲ್ಲಿ ಅಕಾಡೆಮಿಯ ಕಾರ್ಯ ಯೋಜನೆಯ ಕುರಿತಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗಿದ್ದು, ಪ್ರಸಕ್ತ ವರ್ಷ ಏಪ್ರಿಲ್ ೨೩ ರಿಂದ ೨೬ ರ ತನಕ ನಾಪೋಕ್ಲು ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ "ಚೀಯಕಪೂವಂಡ ಕೇರ್ ಬಲಿ ನಮ್ಮೆ-೨೦೨೬ ಅನ್ನು ಯಶಸ್ವಿಗೊಳಿಸಲು ಹಲವು ಕಾರ್ಯತಂತ್ರಗಳನ್ನು ರೂಪಿಸಲಾಯಿತು.

ಕೇರ್ ಬಲಿ ನಮ್ಮೆಯನ್ನು ಶಿಸ್ತುಬದ್ಧವಾಗಿ ನಡೆಸುವುದಕ್ಕೆ ಪೂರಕವಾದ ತಂಡವನ್ನು ರಚಿಸುವಂತೆ ತೀರ್ಮಾನಿಸಲಾಯಿತು. ಅದರಂತೆ ಚೀಯಕಪೂವಂಡ ಕೇರ್ ಬಲಿ ನಮ್ಮೆಯ (ಟೂರ್ನಮೆಂಟ್ ಡೈರೆಕ್ಟರ್) ಕ್ರೀಡಾಕೂಟ ನಿರ್ದೇಶಕರಾಗಿ ಅಕಾಡೆಮಿಯ ಉಪಾಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ೧೦ ಜನ ತೀರ್ಪುಗಾರರು, ೫ ಸದಸ್ಯರ ತಾಂತ್ರಿಕ ಸಮಿತಿ, ೪ ಸದಸ್ಯರ ವೀಡಿಯೋ ಸಮಿತಿ ರಚಿಸಲಾಯಿತು. ಈ ಬಾರಿಯ ನಮ್ಮೆಯಲ್ಲಿ ೪೦೦ಕ್ಕೂ ಹೆಚ್ಚು ಕೊಡವ ಕುಟುಂಬ ತಂಡಗಳು ಭಾಗವಹಿಸುವ ನಿರೀಕ್ಷೆಯಿದ್ದು, ೫ ಅಂಕಣಗಳನ್ನು ನಿರ್ಮಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಮೈದಾನದಲ್ಲಿ ಇದುವರೆಗೆ ನಮ್ಮೆ ಆಯೋಜಿಸಿದ್ದ ೪ ಕುಟುಂಬಗಳಿಗೆ ವ್ಯವಸ್ಥಿತವಾದ ಪ್ರತ್ಯೇಕ ಆಸನಗಳ ವ್ಯವಸ್ಥೆಯನ್ನೊಳಗೊಂಡAತೆ ಕ್ರೀಡಾ ಪ್ರೇಮಿಗಳಿಗೆ ಗ್ಯಾಲರಿಯ ವ್ಯವಸ್ಥೆ, ಉತ್ತಮ ವೇದಿಕೆ ನಿರ್ಮಿಸಲು ಚೀಯಕಪೂವಂಡ ಕುಟುಂಬಸ್ಥರಿಗೆ ಸಲಹೆ ನೀಡಲಾಗಿದ್ದು, ಈ ಬಾರಿಯ ಚೀಯಕಪೂವಂಡ ಕೇರ್ ಬಲಿ ನಮ್ಮೆಯನ್ನು "ಭಾರತೀಯ ಬುಕ್ ಆಫ್ ರೆಕಾರ್ಡ್'ಗೆ" ಸೇರಿಸಲು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಅಕಾಡೆಮಿ ಸ್ಥಾಪಕ ಅಧ್ಯಕ್ಷ ಪೊನ್ನೊಲತಂಡ ಕಿರಣ್ ಪೊನ್ನಪ್ಪ, ಉಪಾಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಕಾರ್ಯದರ್ಶಿ ಉಳುವಂಗಡ ಲೋಹಿತ್ ಭೀಮಯ್ಯ, ನಿರ್ದೇಶಕರಾದ ಚೆಟ್ಟಂಗಡ ಕಂಬ ಕಾರ್ಯಪ್ಪ, ಕೊಣಿಯಂಡ ಮಂಜು ಮಾದಯ್ಯ ಉಪಸ್ಥಿತರಿದ್ದರು.