ಕಣಿವೆ, ಜ. ೨೩: ಜೀವನದಿ ಕಾವೇರಿಯಲ್ಲಿ ನೀರಿನ ಹರಿವು ದಿನೇ ದಿನೇ ಕ್ಷೀಣಿಸುತ್ತಿದೆ. ಮಳೆ ಇಲ್ಲದ ಕಾರಣ ನದಿಯ ಎರಡೂ ಕಡೆಯ ದಂಡೆಗಳಲ್ಲಿ ಕೃಷಿಕರು ಬೆಳೆದಿದ್ದ ಕೃಷಿ ಫಸಲಿಗೆ ನೀರಿನ ಶೀತಾಂಶ ಕುಸಿಯುತ್ತಿದ್ದಂತೆ ಬಹುತೇಕ ಕೃಷಿಕರು ನದಿಯಲ್ಲಿ ಅಳವಡಿಸಿರುವ ಪಂಪ್‌ಸೆಟ್‌ಗಳಿಗೆ ಕೆಲಸ ಕೊಟ್ಟ ಪರಿಣಾಮ ನದಿಯಲ್ಲಿ ಹರಿವ ನೀರಿನ ಪ್ರಮಾಣ ಕ್ಷೀಣವಾಗುತ್ತಿದೆ.
ಕುಡಿಯುವ ನೀರು ಕುಶಾಲನಗರಕ್ಕೆ ಇನ್ನೊಂದು ತಿಂಗಳಷ್ಟೆ
ಕುಶಾಲನಗರ ಪಟ್ಟಣದ ಸರಿಸುಮಾರು ೨೦ ಸಾವಿರಕ್ಕೂ ಹೆಚ್ಚು ಜನಸಂಖ್ಯೆಗೆ ಕುಡಿಯುವ ನೀರು ಪೂರೈಸುತ್ತಿರುವ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚು ಎಂದರೆ ಮುಂದಿನ ಒಂದು ತಿಂಗಳ ಕಾಲ ಪೂರೈಕೆ ಮಾಡಬಹುದಷ್ಟೆ ಎನ್ನುತ್ತಿದ್ದಾರೆ ಜಲಮಂಡಳಿ ಅಧಿಕಾರಿಗಳು.
ಕುಶಾಲನಗರದ ಮಾರಮ್ಮನ ದೇವಾಲಯದ ಕಾವೇರಿ ನದಿ ದಂಡೆಯಲ್ಲಿ ಇರುವ ನೀರೆತ್ತುವ ಯಂತ್ರಗಾರದ ಬಳಿ ಕಾವೇರಿ ನದಿಯ ನೀರಿನ ಮಟ್ಟ ಗಣನೀಯವಾಗಿ ಕುಸಿತ ಕಂಡಿದ್ದು ನದಿಯಾಚೆಯ ಗ್ರಾಮಗಳ ಮಂದಿ ನದಿಯನ್ನು ಕಾಲ್ನಡಿಗೆಯಲ್ಲಿ ದಾಟಿಯೇ ಕುಶಾಲನಗರ ಪಟ್ಟಣ ಸೇರುತ್ತಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಇಲ್ಲಿನ ನದಿ ದಂಡೆಯಲ್ಲಿ ಜಲಮಂಡಳಿಯ ವತಿಯಿಂದ ಮರಳು ಚೀಲಕಟ್ಟಿ ನೀರನ್ನು ಸಂಗ್ರಹಿಸಿ ಯಂತ್ರಗಾರದ ಮೂಲಕ ನೀರನ್ನು ಮೇಲೆತ್ತುವ ಕಾರ್ಯಕ್ಕೆ ಚಿಂತನೆ ನಡೆಸಲಾಗಿದೆ.
ಅಮೃತ್ ೨ ಯೋಜನೆ ವಿಳಂಬ
ಕುಶಾಲನಗರದ ಕಾವೇರಿ ನದಿಯಲ್ಲಿ ನೀರು ಕ್ಷೀಣಿಸಿದ ಬಳಿಕ ಪರ್ಯಾಯವಾಗಿ ಹಾರಂಗಿ ಜಲಾಶಯದ ನೀರನ್ನು ನದಿಯ ಮೂಲಕ ಹರಿಸಿ ಹಳೆ ಕೂಡಿಗೆಯ ಕಾವೇರಿ-ಹಾರಂಗಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸಂಗಮದ ಬಳಿಯಿಂದ ಜಾಕ್‌ವೆಲ್ ನಿರ್ಮಿಸಿ ಸುಮಾರು ಏಳು ಕಿ.ಮೀ. ದೂರದ ಕುಶಾಲನಗರದ ಜಲಮಂಡಳಿಯ ನೀರು ಸಂಗ್ರಹಾಗಾರಕ್ಕೆ ಪೂರೈಸಿ ಗ್ರಾಹಕರಿಗೆ ವಿತರಿಸುವ ದೂರಗಾಮಿ ಯೋಜನೆಯಾದ ಅಮೃತ್ ೨ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಸಕಾಲದಲ್ಲಿ ಮಳೆ ಬಾರದಿದ್ದರೆ ಕುಶಾಲನಗರದ ಜನತೆಯ ದಾಹ ನೀಗಿಸಲು ಕಾವೇರಮ್ಮನೇ ಗತಿ.
- ಕೆ.ಎಸ್. ಮೂರ್ತಿ