ಸೋಮವಾರಪೇಟೆ, ಜ. ೨೩: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಿರಗಂದೂರು ಗ್ರಾ. ಪಂ., ಬೆಂಗಳೂರಿನ ಸಿಎಂಸಿಎ ಸಂಸ್ಥೆ ಮತ್ತು ನಾವು ಪ್ರತಿಷ್ಠಾನ ಸಹಯೋಗದಲ್ಲಿ ಕಿರಗಂದೂರು ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಮಕ್ಕಳ ಗ್ರಾಮಸಭೆ ನಡೆಯಿತು. ಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲೆಗಳಿಗೆ ಬೇಕಾದಂತಹ ಸಿಸಿ ಕ್ಯಾಮೆರಾ, ವಿದ್ಯುತ್ ಸಮಸ್ಯೆ, ಬೀದಿ ನಾಯಿಗಳ ಹಾವಳಿ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದರು. ವಿದ್ಯಾರ್ಥಿ ಕಾರ್ತಿಕ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಸಭೆಯಲ್ಲಿ ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿದರು. ಸಭೆಯ ಅಧ್ಯಕ್ಷತೆಯನ್ನು ವಿದ್ಯಾರ್ಥಿನಿ ಜನನಿ ವಹಿಸಿದ್ದಳು. ವೇದಿಕೆಯಲ್ಲಿ ಕಿರಗಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಾರಾ ಸುಧೀರ್, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ಯಾಮಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾವಿತ್ರವ್ವ, ಮಕ್ಕಳ ಸಹಾಯವಾಣಿ ಇಲಾಖಾಧಿಕಾರಿ ಯೋಗೇಶ್, ನಾವು ಪ್ರತಿಷ್ಠಾನದ ಸಂಸ್ಥಾಪಕರಾದ ಗೌತಮ್ ಕಿರಗಂದೂರು, ಸುಮನಾ, ವನಿತಾ, ಪೊನ್ನಪ್ಪ ಕಾರ್ಯದರ್ಶಿ ಕೃಷ್ಣಪ್ಪ, ಸಾಮಾಜಿಕ ಕಾರ್ಯಕರ್ತರಾದ ಪದ್ಮನಾಭ, ಕಿರಗಂದೂರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಇದ್ದರು.