ಮಡಿಕೇರಿ,ಜ.೨೪; ಕೊಡಗು ಗೌಡ ಸಮಾಜಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಕ್ಷೇತ್ರದ ಶಾಸಕರೂ ಆಗಿರುವ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರ ಪ್ರಯತ್ನದಿಂದಾಗಿ ಸರಕಾರಿ ಜಾಗ ಮಂಜೂರಾತಿಯಾಗಿದೆ ಎಂದು ಗೌಡ ಸಮಾಜದ ನೂತನ ಆಡಳಿತ ಮಂಡಳಿ ಪ್ರಮುಖರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಉಪಾಧ್ಯಕ್ಷ ಸೂರ್ತಲೆ ಸೋಮಣ್ಣ; ಗೌಡ ಸಮಾಜಕ್ಕೆ ೪೦ ವರ್ಷಗಳ ಇತಿಹಾಸವಿದ್ದು ಹಲವಷ್ಟು ಕಾರ್ಯ ಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದೆ. ಕಳೆದ ೧೦ವರ್ಷಗಳ ಅವಧಿಯಲ್ಲಿ ಪೇರಿಯನ ಜಯಾನಂದ ಅವರ ಅಧ್ಯಕ್ಷತೆಯಲ್ಲಿ ಆಧುನಿಕ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗಿದೆ. ಈ ಅವಧಿಯಲ್ಲಿ ಸಮಾಜಕ್ಕೆ ಸ್ವಂತ ಜಾಗದ ಅವಶ್ಯಕತೆಯನ್ನು ಮನಗಂಡು ಮದೆ ಗ್ರಾಮದ ಸ.ನಂ.೯೮/೧ರಲ್ಲಿ ೮ ಎಕರೆ ಜಾಗವನ್ನು ಮಂಜೂರು ಮಾಡಿಕೊಡುವಂತೆ ಸರಕಾರಕ್ಕೆ ೪ಏಳನೇ ¥(ಮೊದಲ ಪುಟದಿಂದ) ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸತತ ಪ್ರಯತ್ನದಿಂದಾಗಿ ಅಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಮಂಜೂರಾತಿಯಾಗುವ ಹಂತದಲ್ಲಿದ್ದಾಗ ಸರಕಾರ ಬದಲಾಗಿ ಅದಕ್ಕೆ ತಡೆಯಾಗಿ ವಾಪಸ್ ಹೋಗಿತ್ತು. ಈ ಬಗ್ಗೆ ಶಾಸಕ ಪೊನ್ನಣ್ಣ ಅವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷ ಅವಧಿಯಲ್ಲಿ ಶಾಸಕರು ಸತತ ಪ್ರಯತ್ನ ಹಾಗೂ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರ ಸಹಕಾರದಿಂದಾಗಿ ಇದೀಗ ೬ಎಕರೆ ಜಾಗ ಮಂಜೂರಾತಿಯಾಗಿದೆ ಎಂದು ತಿಳಿಸಿದರು.
ಈ ಜಾಗದಲ್ಲಿ ನಾಡಿನ ಎಲ್ಲ ಜನಾಂಗದವರಿಗಾಗಿ ಶಿಕ್ಷಣ, ಕ್ರೀಡಾಭಿವೃದ್ಧಿ ಹಾಗೂ ಸಾಂಸ್ಕೃತಿಕ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುವದು. ಇನ್ನುಳಿದ ಜಾಗವನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು. ಸಮಾಜದ ಅಧ್ಯಕ್ಷ ದಂಬೆಕೋಡಿ ಆನಂದ ಮಾತನಾಡಿ; ಸರಕಾರದಿಂದ ಮಂಜೂರಾದ ಜಾಗದಲ್ಲಿ ಕೃಷಿಕ್ ಫೌಂಡೇಶನ್ ಮೂಲಕ ಐಎಎಸ್, ಕೆಎಎಸ್, ಐಪಿಎಸ್ ಮೊದಲಾದ ತರಬೇತಿ ನೀಡಲಾಗುವದು. ಅಲ್ಲದೆ, ಕೌಶಲ್ಯಾಭಿವೃದ್ಧಿ ನಿಗಮದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವದು ಎಂದು ಹೇಳಿದರು. ಪ್ರಸ್ತುತ ಮಡಿಕೇರಿಯಲ್ಲಿರುವ ಗೌಡ ಸಮಾಜದ ಬಳಿ ವಾಹನ ನಿಲುಗಡೆಗೆ ಸ್ಥಳಾವಕಾಶದ ಕೊರತೆಯಿದ್ದು, ಬಹುಮಹಡಿ ವಾಹನ ನಿಲುಗಡೆ ವ್ಯವಸ್ಥೆ ಮಾಡುವ ಉದ್ದೇಶ ಇರುವದಾಗಿ ಹೇಳಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಪೂಳಕಂಡ ಸಂದೀಪ್, ನಿರ್ದೇಶಕರುಗಳಾದ ಕೊಲ್ಯದ ಗಿರೀಶ್, ಹುದೇರಿ ರಾಜೇಂದ್ರ, ಮಾಜಿ ಅಧ್ಯಕ್ಷ ಪೇರಿಯನ ಜಯಾನಂದ ಇದ್ದರು.