ಮಡಿಕೇರಿ, ಜ. ೨೫: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.

ನಗರದ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರುತಿಶ್ರೀ ಡಿ. ಮಾತನಾಡಿ, ೧೨ನೇ ಶತಮಾನದಲ್ಲಿ ಬಸವಣ್ಣ ಅವರು ಸೇರಿದಂತೆ ಎಲ್ಲಾ ವಚನಕಾರರ ಬಗ್ಗೆ ಮಾಹಿತಿ ತಿಳಿದುಕೊಳ್ಳುವಂತಾಗಬೇಕು. ಅಂಬಿಗರ ಚೌಡಯ್ಯ ಅವರು ಸಮಾಜಕ್ಕೆ ನೀಡಿರುವ ಸುಧಾರಣೆ ಮತ್ತು ಸಂದೇಶಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಹೇಳಿದರು.

ಶತಶತಮಾನಗಳಿಂದಲೂ ಹತ್ತಾರು ರೀತಿಯ ಮೌಢ್ಯ ಗಳನ್ನು ಹೊತ್ತು ನಲುಗುತ್ತಿದ್ದ ಸಮಾಜಕ್ಕೆ ವೈಚಾರಿಕತೆಯನ್ನು ಕೊಟ್ಟ ಕ್ರಾಂತಿವೀರರು ನಮ್ಮ ಶರಣರು. ಅಂತಹ ಕ್ರಾಂತಿಕಾರಿ ಶರಣರಲ್ಲಿ ಎದ್ದುಕಾಣುವ ಹೆಸರು ಅಂಬಿಗರ ಚೌಡಯ್ಯನವರು ಎಂದು ವಿವರಿಸಿದರು.

ತಹಶೀಲ್ದಾರ್ ಶ್ರೀಧರ್ ಮಾತನಾಡಿ, ಜಗತ್ತಿನಲ್ಲಿ ಮೊದಲ ಬಾರಿಗೆ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶರಣರ ಕೊಡುಗೆ ಅಪಾರ ಎಂದು ಬಣ್ಣಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಮಾತನಾಡಿ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಮೋಳಿಗೆ ಮಾರಯ್ಯ, ಮಡಿವಾಳ ಮಾಚಯ್ಯ, ಕುಂಬಾರ ಗುಂಡಯ್ಯ, ಮಾದಾರ ಚೆನ್ನಯ್ಯ, ಸೂಳೆ ಸಂಕವ್ವೆಯವರೆಗೂ ತಮ್ಮ ವೃತ್ತಿಗಳನ್ನು ಹೇಳಿಕೊಳ್ಳುವ ಈ ಪರಂಪರೆ ಅದ್ಭುತ ಎಂದರು.

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಪದ್ಮಾವತಿ ಇತರರು ಇದ್ದರು. ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು, ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.