ಕಣಿವೆ, ಜ. ೨೪: ಸ್ಮಾರ್ಟ್ ಬ್ರೈನ್ಸ್ ಅಬಾಕಸ್ ಆಕಾಡೆಮಿ ವತಿಯಿಂದ ೪ನೇ ವರ್ಷದ ರಾಜ್ಯ ಮಟ್ಟದ ಅಬಾಕಸ್, ವೇದಿಕ್ ಮ್ಯಾಥ್ಸ್, ರೂಬಿಕ್ಸ್ ಕ್ಯೂಬ್, ಕ್ಯಾಲಿಗ್ರಫಿ ಮತ್ತು ಮಿಡ್‌ಬ್ರೇನ್ ಆಕ್ಟಿವೇಶನ್ ಸ್ಪರ್ಧೆಯನ್ನು ಇಲ್ಲಿನ ರೈತ ಸಹಕಾರ ಭವನದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ೩೦ಕ್ಕೂ ಹೆಚ್ಚು ಶಾಲೆಗಳ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಬಾಕಸ್, ವೇದಿಕ್ ಮ್ಯಾಥ್ಸ್, ರೂಬಿಕ್ಸ್ ಕ್ಯೂಬ್, ಕ್ಯಾಲಿಗ್ರಫಿ ಮತ್ತು ಮಿಡ್‌ಬ್ರೇನ್ ಆಕ್ಟಿವೇಶನ್, ಚಿತ್ರಕಲೆ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಅನಾವರಣಗೊಳಿಸಿದರು.

ಅಬಾಕಸ್‌ನಲ್ಲಿ ಕಲಿಕಾ ಶಿಕ್ಷಣ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಯೂನಿಕ್ ಅಕಾಡೆಮಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಚಿನ್ಮಯ್, ಅಬಾಕಸ್ ಅಕಾಡೆಮಿಯಲ್ಲಿ ಕಲಿತು ಕಣ್ಣಿಗೆ ಬಟ್ಟೆ ಕಟ್ಟಿ ನಿಗದಿತ ಸಮಯದಲ್ಲಿ ಚೆಸ್ ಆಡುವ ಮೂಲಕ ಇಂಡಿಯಾ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸಾಧನೆ ಮಾಡಿರುವುದನ್ನು ಪರಿಗಣಿಸಿ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ ಪಿ ಶಶಿಧರ್ ಮಾತನಾಡಿ ಶಿಕ್ಷಣದೊಂದಿಗೆ ಅಬಾಕಸ್ ಮೂಲಕವೂ ವಿದ್ಯಾರ್ಥಿಗಳು ವಿಶೇಷ ಕಲಿಕ ಸಾಮರ್ಥ್ಯದೊಂದಿಗೆ ತಮ್ಮ ಪ್ರತಿಭಾನ್ವಿತ ಸಾಧನೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡು ಮುನ್ನಡೆಯುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.

ಸ್ಮಾರ್ಟ್ ಬ್ರೈನ್ಸ್ ಅಬಾಕಸ್ ಅಕಾಡೆಮಿ ನಿರ್ದೇಶಕಿ ಕುಸುಮಾ ಎಸ್.ರಾಜ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಕೇಶ್, ಸಮಾಜ ಸೇವಕ ಸೈಜನ್ ಕೆ ಪೀಟರ್, ಸುಕೇಶ್ ರಾಜ್, ಪ್ರಮುಖರಾದ ವಿಶಾಲಕ್ಷಿ, ಪ್ರಭಾವತಿ ಸೇರಿದಂತೆ ಗಣ್ಯರು, ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.