ವೀರಾಜಪೇಟೆ, ಜ. ೨೪: ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಬೇಕು. ಜೊತೆಗೆ ಪೋಷಕರು ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವುದರ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಎಂದು ಅರಮೇರಿ ಕಳಂಚೇರಿ ಮಠದ ಮಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ವೀರಾಜಪೇಟೆಯ ತಾಲೂಕು ಮೈದಾನದಲ್ಲಿ ಜರುಗಿದ ಪಟ್ಟಣದ ಕೂರ್ಗ್ ವ್ಯಾಲಿ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೂರ್ಗ್ ವ್ಯಾಲಿ ವಿದ್ಯಾಸಂಸ್ಥೆಯು ೨೫ ವರ್ಷಗಳನ್ನು ಪೂರೈಸಿದ್ದು ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಈ ಸಂಸ್ಥೆ ಕೇವಲ ವಿದ್ಯಾರ್ಜನೆಗೆ ಮಾತ್ರವಲ್ಲದೆ ಕ್ರೀಡೆ, ಸಾಂಸ್ಕöÈತಿಕ ಚಟುವಟಿಕೆಗಳಲ್ಲಿಯೂ ಹಲವಾರು ಸಾಧನೆಗಳನ್ನು ಮಾಡಿ ಹೆಗ್ಗಳಿಕೆಗೆ ಪಾತ್ರವಾಗಿದೆ. ಪೋಷಕರು ವಿದ್ಯಾರ್ಥಿಗಳ ಶಿಕ್ಷಣದ ಕಡೆ ಹೆಚ್ಚು ಗಮನವನ್ನು ಹರಿಸಬೇಕು. ಹಾಗೆಯೆ ಅವರಿಗೆ ಸಂಸ್ಕಾರವನ್ನು ಕಲಿಸಿ ಎಂದು ಕರೆ ನೀಡಿದರು. ಸಂಸ್ಥೆ ೨೫ ವರ್ಷ ಪೂರೈಸಲು ಆಡಳಿತ ಮಂಡಳಿಯ ಚಿತ್ರ ಭಾನು ಹಾಗೂ ಸುಮಚಿತ್ರ ಭಾನು ಅವರ ಪಾತ್ರ ಪ್ರಮುಖವಾಗಿದ್ದು ಅವರು ಹಲವಾರು ಸವಾಲುಗಳನ್ನು ಎದುರಿಸಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶಾಲೆಯು ಉತ್ತಮ ಫಲಿತಾಂಶ ನೀಡುವುದರ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೀರಾಜಪೇಟೆ ಸಂತ ಅನ್ನಮ್ಮ ಪಿ.ಯು. ಕಾಲೇಜಿನ ಪ್ರಾಂಶುಪಾಲ ಹಾಗೂ ಅಮ್ಮತ್ತಿ ಸಂತ ಅಂತೋಣಿ ಚರ್ಚ್ನ ಗುರುಗಳಾದ ರೆ.ಫಾ. ಮದಲೈ ಮುತ್ತು ಮಾತನಾಡಿ, ಒಂದು ವಿದ್ಯಾಸಂಸ್ಥೆಯು ದೊಡ್ಡದಿರಲಿ ಅಥವಾ ಸಣ್ಣದಿರಲಿ, ವಿದ್ಯಾಸಂಸ್ಥೆ ನಡೆಸುವವರ ಮನೋಭಾವನೆ ಮುಖ್ಯವಾಗಿದ್ದು ಅನೇಕ ಸವಾಲುಗಳ ಮಧ್ಯೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿರುವ ಆಡಳಿತ ಮಂಡಳಿಯವರಿಗೆ ಶುಭ ಕೋರಿದರು.

ಸಂಸ್ಥೆಯ ವ್ಯವಸ್ಥಾಪಕರು ಹಾಗೂ ಪ್ರಾಂಶುಪಾಲರಾದ ಸುಮಚಿತ್ರ ಭಾನು ಮಾತನಾಡಿ, ಸಂಸ್ಥೆ ನಡೆದು ಬಂದ ಹಾದಿಯ ಬಗ್ಗೆ ಸ್ಮರಿಸಿಕೊಂಡರು.

ರಜತ ಮಹೋತ್ಸವದ ಸಂದರ್ಭದಲ್ಲಿ ಹೊರ ತಂದ ವಿದ್ಯಾ ಸಂಪದ ಕಿರು ಹೊತ್ತಿಗೆಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಸಮಾರಂಭದಲ್ಲಿ ವಿದ್ಯಾಸಂಸ್ಥೆ ಯಲ್ಲಿ ಇಲ್ಲಿಯವರೆಗೆ ಸೇವೆ ಸಲ್ಲಿಸಿದ ಶಿಕ್ಷಕರುಗಳು ಹಾಗೂ ಸಿಬ್ಬಂದಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಳೆದ ಬಾರಿಯ ಎಸ್.ಎಸ್.ಲ್.ಸಿ ಪರೀಕ್ಷೆ ಹಾಗೂ ತರಗತಿವಾರು ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕöÈತಿಕ ಕಾರ್ಯಕ್ರಮಗಳು ಮೂಡಿ ಬಂದವು. ವೇದಿಕೆಯಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಚಿತ್ರ ಭಾನು, ಕಾರ್ಯದರ್ಶಿ ಪ್ರಣವ್ ಚಿತ್ರ ಭಾನು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.