ವೀರಾಜಪೇಟೆ, ಜ. ೨೪: ಶ್ರೀ ಆದಿ ಬೈತೂರು(ವಾಯತ್ತೂರು ಕಾಲಿಯಾರ್ ಶ್ರೀ ಶಿವಕ್ಷೇತ್ರ) ವಿನಲ್ಲಿ ಬೈತೂರು ಹಬ್ಬದ ಮೂರನೇ ದಿನದ ಆಚರಣೆ ಭಕ್ತಿಯಿಂದ ನಡೆಯಿತು. ದೇವಾಲಯದ ತಕ್ಕರಾದ ಪುಗ್ಗೇರ ಪೊನ್ನಪ್ಪ ಅವರ ಮುಂದಾಳತ್ವದಲ್ಲಿ ವಿವಿಧ ಆಚರಣೆಗಳು ನಡೆದವು.

ಹಬ್ಬದ ಅಂಗವಾಗಿ ಬೆಳಗ್ಗೆ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯಿತು. ದೇವರಿಗೆ ನೈವೇದ್ಯ ಅರ್ಪಣೆ, ತುಪ್ಪಾಭಿಷೇಕ, ಕೊಡಗಿನ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಆನೆ ಅಂಬಾರಿ ಮೂಲಕ ದೇವರ ದರ್ಶನ, ತಡಂಬು ನೃತ್ಯ(ಉತ್ಸವ ಮೂರ್ತಿ) ಕೊಡವ ಸಮಾಜದ ವತಿಯಿಂದ ಬೊಳಕಾಟ್, ಉಮ್ಮತ್ತಾಟ್ ಪ್ರದರ್ಶನ ನಡೆಯಿತು.

ತಾ. ೨೫ ರಂದು (ಇಂದು) ದೊಡ್ಡ ಹಬ್ಬ ನಡೆಯಲಿದ್ದು, ಬೆಳಿಗ್ಗೆ ೯ ಗಂಟೆಗೆ ತಿರುವಳಕಾರರು(ಮೈಮೇಲೆ ದೇವರು ಬರುವವರು)ಹೊಳೆಗೆ ಸ್ನಾನಕ್ಕೆ ತೆರಳುತ್ತಾರೆ.

ಅದೇ ವೇಳೆ ಕೊಡಗಿನ ದೇವರುಗಳ ದರ್ಶನ, ತಿರುವಳಕಾರರು ಆಯುಧ ಹೊತ್ತು ಕುಣಿಯುತ್ತಾರೆ. ಬಳಿಕ ನೈವೇದ್ಯ ಅರ್ಪಣೆ, ಪ್ರಸಾದ ಸ್ವೀಕಾರ ನಡೆಯಲಿದೆ. ೨೬ ರಂದು ಆರಾಟ್ ಉತ್ಸವ ನಡೆಯಲಿದೆ.

ವಾಯತ್ತೂರು ದೇವಸ್ವಂನಲ್ಲಿ ಪ್ರತಿ ವರ್ಷ ಭಕ್ತರು ಮತ್ತು ರೈತರು ಅರ್ಪಿಸುವ ಅಕ್ಕಿ ಮತ್ತು ತರಕಾರಿಗಳನ್ನು ಬಳಸಿ ನಡೆಸುವ ಅನ್ನದಾನವು ಪ್ರಾಚೀನ ಕಾಲದಿಂದಲೂ ವಾಯತ್ತೂರು ಊಟು ಎಂಬ ಹೆಸರಿನಲ್ಲಿ ಬಹಳ ಪ್ರಸಿದ್ಧವಾಗಿದ್ದು, ಎರಡು ದಿನಗಳ ಕಾಲ ಎತ್ತು ಪೋರಾಟ್ ಹಾಗೂ ಅಕ್ಕಿ ಅಳೆಯುವುದರ ಮೂಲಕ ಆಚರಣೆ ನಡೆಯಿತು.

ದೇವಾಲಯದಲ್ಲಿ ಸಾಂಪ್ರಾದಾಯಿಕ ಉಡುಗೆ ತೊಡುಗೆ ಗಳೊಂದಿಗೆ ಮಲಯಾಳಿಗಳು ಮತ್ತು ಕೊಡಗಿನ ನಿವಾಸಿಗಳು ಒಂದೇ ಬಾರಿಗೆ ಸೇರಿದ್ದರು. ಮಕರಂ ೧೦ರ ಹಬ್ಬವು ಈ ದೇವಾಲಯದಲ್ಲಿ ಊಟು ಉತ್ಸವದ ಪ್ರಮುಖ ಭಾಗವಾಗಿ ಇದೀಗ ದೇವಸ್ಥಾನದಲ್ಲಿ ಕೊಡಗಿನ ಭಕ್ತರಿಂದ ತುಂಬಿ ತುಳುಕುತ್ತಿದೆ.

ದೇವಸ್ಥಾನದಲ್ಲಿ ತಂತ್ರಿ ಬ್ರಹ್ಮಶ್ರೀ ಎಡವಲತ್, ಪುತಯೂರು ಮಣಕ್ಕಲ್ ಕುಬೇರನ್ ನಂಬೂದರಿಪಾಡ್ ಅವರ ಮಾರ್ಗದರ್ಶನದಲ್ಲಿ ದೇವಸ್ಥಾನದ ತಕ್ಕರಾದ ಪುಗ್ಗೇರ ಪೊನ್ನಪ್ಪ ಮತ್ತು ರತೀಶ್ ನಂಬೂದರಿ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯುತ್ತಿವೆ. ದೇವಸ್ಥಾನದ ಮುಖ್ಯ ಅರ್ಚಕ ಪ್ರಸನ್ನನ್ ನಂಬೂದರಿ ತಡಂಬು ನೃತ್ಯ ಮಾಡಿದರು.

- ಈಶಾನ್ವಿ