ಕುಶಾಲನಗರ, ಜ. ೨೪: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಡಿಕೇರಿ ಘಟಕದ ಬಸ್‌ಗಳ ಮೂಲಕ ಶಕ್ತಿ ಯೋಜನೆಯಲ್ಲಿ ಇದುವರೆಗೆ ಒಟ್ಟು ೧ ಕೋಟಿ ೪೪ ಲಕ್ಷ ೬೮ ಸಾವಿರದ ೫೦೨ ಮಹಿಳಾ ಪ್ರಯಾಣಿಕರು ಮತ್ತು ೩ ಲಕ್ಷದ ೪೪ ಸಾವಿರ ೬೭೧ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಪ್ರಯಾಣಿಸಿ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಮಡಿಕೇರಿ ಘಟಕ ಅಧಿಕಾರಿಗಳು ತಿಳಿಸಿದ್ದಾರೆ.

ಕುಶಾಲನಗರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ವಿ.ಪಿ ಶಶಿಧರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅನುಪಾಲನಾ ವರದಿ ನೀಡಿರುವ ಘಟಕ ವ್ಯವಸ್ಥಾಪಕರು, ದಿನವೊಂದಕ್ಕೆ ಸರಾಸರಿ ೧,೫೪೬ ಪ್ರಯಾಣಿಕರು ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ೨೦೨೬ ಜನವರಿ ೧೪ರ ತನಕ ಶೇ.೧೧.೬೮ ರಷ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳಗೊಂಡಿದೆ.

೨೦೨೬ ಜನವರಿ ೧೪ರ ತನಕ ಶಕ್ತಿ ಯೋಜನೆಯಿಂದ ಸಂಸ್ಥೆಗೆ ಒಟ್ಟು ರೂ.೬೩ ಕೋಟಿ ೧ ಲಕ್ಷದ ೩ ಸಾವಿರದ ೩೫೭ ಆದಾಯ ಬಂದಿರುವುದಾಗಿ ತಿಳಿಸಿದ್ದಾರೆ.

ಸರಾಸರಿ ದಿನವೊಂದಕ್ಕೆ ೬ ಲಕ್ಷದ ೫೭ ಸಾವಿರ ೪೨ ರೂಗಳು ಬಂದಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಇದುವರೆಗೆ ಶೇ.೩೦.೨೭ರಷ್ಟು ಮಹಿಳಾ ಪ್ರಯಾಣಿಕರಿಂದ ಬಂದ ಆದಾಯ ಹೆಚ್ಚಳವಾಗಿರುವುದಾಗಿ ಲಿಖಿತವಾಗಿ ಮಾಹಿತಿ ನೀಡಿದ್ದಾರೆ.

ಈ ಸಂದರ್ಭ ಸಭೆಯಲ್ಲಿ ಮಾಹಿತಿ ನೀಡಿದ ಘಟಕದ ಅಧಿಕಾರಿಗಳು ಗುಡ್ಡೆಹೊಸೂರು-ಹಾರಂಗಿ-ಕುಶಾಲನಗರ ಮಾರ್ಗವಾಗಿ ಸದ್ಯದಲ್ಲಿಯೇ ಸರಕಾರಿ ಬಸ್‌ಗಳನ್ನು ಒದಗಿಸಿ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಸಭೆಯಲ್ಲಿ ನಡೆದ ನಡಾವಳಿಗಳ ಅನುಷ್ಠಾನಗಳ ಬಗ್ಗೆ ಸಭೆಗೆ ಮಾಹಿತಿ ಒದಗಿಸಿದರು.

ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆ ಇಲ್ಲದೆ ಉತ್ತಮ ಸೇವೆ ನೀಡುವಂತೆ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ವರ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಕೆ.ಸಿ. ಶಶಿ ಭೀಮಯ್ಯ, ಬಿ.ಸಿ. ಮಲ್ಲಿಕಾರ್ಜುನ, ಅಬ್ದುಲ್ ರಜಾಕ್, ಫಿಲೋಮಿನಾ, ಹೆಚ್.ಎನ್. ರಾಜಶೇಖರ್, ಎಸ್.ಎ ಶ್ರೀನಿವಾಸ್, ಕಿಶೋರ್, ಶ್ರೀನಿವಾಸ ಕುಮಾರ್, ರಫೀಕ್ ಖಾನ್, ಆದಮ್ ಇದ್ದರು.