ಮುಳ್ಳೂರು, ಜ. ೨೪: ಸಮೀಪದ ಆಲೂರು-ಸಿದ್ದಾಪುರ ಗ್ರಾ.ಪಂ.ಯ ೨೦೨೫-೨೬ನೇ ಸಾಲಿನ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಮುದಾಯ ಭವನದಲ್ಲಿ ನಡೆಯಿತು.

ಗ್ರಾಮ ಸಭೆಯಲ್ಲಿ ಪಾಲ್ಗೊಂಡ ಗ್ರಾಮಸ್ಥರು ಕಂದಾಯ ಇಲಾಖೆ ಕಡತಗಳ ವಿಲೇವಾರಿ ವಿಳಂಬ ಆಗುತ್ತಿರುವುದು, ಜೆಜೆಎಂ ಯೋಜನೆಯ ಅವೈಜ್ಞಾನಿಕ ಕಾಮಗಾರಿ ಮತ್ತು ಕೆಲವು ಗ್ರಾಮಗಳಲ್ಲಿ ಕಾಮಗಾರಿ ಅಪೂರ್ಣಗೊಂಡಿರುವ ಬಗ್ಗೆ, ಬೀದಿನಾಯಿಗಳ ಹಾವಳಿ, ಕಾಡಾನೆ ಸಮಸ್ಯೆ ಸೇರಿದಂತೆ ಇತರ ಸಮಸ್ಯೆಗಳನ್ನು ತೆರೆದಿಟ್ಟರು.

ಕಂದಾಯ ಇಲಾಖೆಗೆ ಸಂಬAಧಪಟ್ಟAತೆ ರೈತರು ಸ್ಥಳೀಯ ಕಂದಾಯ ಇಲಾಖೆ ಕಚೇರಿಗೆ ಹೋಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ರೈತರ ಕಡತ ದಾಖಲಾತಿಯನ್ನು ತಹಶೀಲ್ದಾರರ, ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಿಕೊಡುತ್ತಾರೆ. ರೈತರಿಗೆ ಸಂಬAಧಪಟ್ಟ ವಿಲೇವಾರಿ ಆಗಿರುವ ಕಡತ ದಾಖಲಾತಿ ಮತ್ತೆ ಸ್ಥಳೀಯ ಕಂದಾಯ ಇಲಾಖೆಗೆ ವಾಪಾಸಾಗುವಾಗ ತುಂಬಾ ವಿಳಂಬವಾಗುತ್ತದೆ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತದೆ ಎಂದು ರೈತರ ಪರವಾಗಿ ಮಾಜಿ ತಾ.ಪಂ. ಸದಸ್ಯ ಸಿ.ಕೆ. ಚಂದ್ರಶೇಖರ್ ಸಮಸ್ಯೆಯನ್ನು ಹೇಳಿಕೊಂಡರು.

ಕೇAದ್ರ ಸರಕಾರದ ಜಲಜೀವನ್ ಮಿಷನ್ ಸಂಸ್ಥೆಯ ಕುಡಿಯುವ ನೀರು ಯೋಜನೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕೇಂದ್ರ ಸರಕಾರ ಗ್ರಾಮೀಣ ಪ್ರದೇಶದಲ್ಲಿ ಜಿಜಿಎಂ ಯೋಜನೆಯ ಸೌಲಭ್ಯ ಶೇ. ೧೦೦ ರಷ್ಟು ಪೂರ್ಣಗೊಳಿಸಬೇಕೆಂದು ಸೂಚಿಸಿದರೂ ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಮಗಾರಿ ಶೇ. ೫೦ ರಷ್ಟು ಅಪೂರ್ಣಗೊಂಡಿದೆ ಎಂದು ಗ್ರಾಮಸ್ಥ ಕೆ.ವಿ. ಜಯಕುಮಾರ್ ಸಭೆಯ ಮುಂದಿಟ್ಟರು.

ಕಣಿವೆ, ಬಸವನಹಳ್ಳಿ ಗ್ರಾಮದಲ್ಲಿ ಜೆಜೆಎಂ ಯೋಜನೆಯಿಂದ ಕುಡಿಯುವ ನೀರಿನ ಟ್ಯಾಂಕ್ ಮತ್ತು ನೀರು ಸರಬರಾಜು ಆಗುವ ಕೊಳವೆಯ ಅಳವಡಿಕೆ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿರುವುದರಿಂದ ನೀರು ಸರಬರಾಜು ಆಗುತ್ತಿಲ್ಲ ಎಂದು ಗ್ರಾಮಸ್ಥ ಕೆ.ಎನ್. ದಿನೇಶ್ ಆರೋಪಿಸಿದರು.

ಜೆಜೆಎಂ ಯೋಜನೆಯ ಸಮಸ್ಯೆಗಳ ಕುರಿತು ಗ್ರಾಮಸ್ಥರು ಇಲಾಖೆ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ಒಬ್ಬ ರೈತರು ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ವ್ಯವಸ್ಥೆ ಮಾಡಿ ಎಂದು ಗ್ರಾಮಸ್ಥ ಸಂದೇಶ್ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಅಧಿಕಾರಿ, ಕಟ್ಟೆಪುರ-ಬಾಣವಾರ ವ್ಯಾಪ್ತಿಯ ಕಾಡಾನೆ ಕಾರಿಡಾರ್ ಅರಣ್ಯದಲ್ಲಿ ೧೨ ಕಾಡಾನೆಗಳು ಸಂಚರಿಸುತ್ತಿದ್ದು, ಕಾಡಾನೆಗಳು ಗ್ರಾಮದೊಳಗೆ ಸಂಚರಿಸುವುದನ್ನು ನಿಯಂತ್ರಿಸಲು ಕಂದಕ ನಿರ್ಮಿಸಲು ಅರಣ್ಯ ಇಲಾಖೆ ಕ್ರಮಕೈಗೊಂಡಿದೆ ಎಂದರು.

ಆಲೂರು-ಸಿದ್ದಾಪುರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದೆ, ಇದನ್ನು ನಿಯಂತ್ರಿಸುವAತೆ ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಪಿಡಿಓ ಚಂದ್ರಶೇಖರ್ ಮತ್ತು ನೋಡಲ್ ಅಧಿಕಾರಿ ನಾಗರಾಜ್, ದೇಶ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿಗೆ ಸಂಬAಧಪಟ್ಟAತೆ ಸುಪ್ರೀಂ ಕೋರ್ಟ್ ಇದನ್ನು ಗಂಭೀರವಾಗಿ ತೆಗೆದುಕೊಂಡು ಇದರ ಹಾವಳಿ ನಿಯಂತ್ರಿಸಲು ಗ್ರಾಮಗಳಲ್ಲಿ ಸಾಕುನಾಯಿಗಳ ಗಣತಿ, ಬೀದಿನಾಯಿಗಳಿಗೆ ಪರಿಣಾಮಕಾರಿ ಸಂತಾನಹರಣ ಶಸ್ತçಚಿಕಿತ್ಸೆ ಮತ್ತು ನಾಯಿಗಳಿಗೆ ಆಶ್ರಯ ತಾಣ ವ್ಯವಸ್ಥೆ ಇವುಗಳನ್ನು ಗ್ರಾ.ಪಂ. ಮಟ್ಟದಿಂದ ಕಡ್ಡಾಯವಾಗಿ ಪಾಲಿಸುವಂತೆ ಆದೇಶ ನೀಡಿದೆ ಎಂದು ವಿವರಿಸಿದರು.

ಗ್ರಾಮಸಭೆಯಲ್ಲಿ ಗ್ರಾಮದ ಸಮಸ್ಯೆಗಳ ಬಗ್ಗೆ ಸ್ವತ: ಗ್ರಾ.ಪಂ. ಉಪಾಧ್ಯಕ್ಷ ಚಂದ್ರಮೋಹನ್, ಹಿರಿಯ ಸದಸ್ಯ ಪಿ.ಎನ್. ಗಂಗಾಧರ್ ಸಭೆಯ ಮುಂದಿಟ್ಟು ಗಮನ ಸೆಳೆದರು. ಸಭೆಯ ನೋಡಲ್ ಅಧಿಕಾರಿಯಾಗಿ ಡಾ. ನಾಗರಾಜ್ ಕಾರ್ಯನಿರ್ವಹಿಸಿದ್ದರು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾ.ಪಂ.ಯ ಸದಸ್ಯರು, ಪಿಡಿಓ ಚಂದ್ರಶೇಖರ್, ಗ್ರಾ.ಪಂ. ಸಿಬ್ಬಂದಿ ಹಾಜರಿದ್ದರು.