ಮಡಿಕೇರಿ, ಜ. ೨೪: ಕಳೆದ ೨೫ ವರ್ಷಗಳಿಂದ ಮಡಿಕೇರಿಯಲ್ಲಿನ ಪ್ರಪ್ರಥಮ ಕೇರಿಯಾದ ಕಾವೇರಿ ಕೊಡವ ಕೇರಿಯ ಆಡಳಿತ ಮಂಡಳಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಉಳ್ಳಿಯಡ ನಂದ ನಂಜಪ್ಪ ಅವರನ್ನು ಕೇರಿಯ ೩೩ನೇ ವರ್ಷದ ಮಹಾಸಭೆ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ಬಸಪ್ಪ ಶಿಶುವಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಿಯ ಉಪಾಧ್ಯಕ್ಷೆ ತೊತ್ತಿಯಂಡ ಸರಸ್ವತಿ ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಂದ ಅವರಿಗೆ ಸನ್ಮಾನ ಮಾಡಲಾಯಿತು.
ಅಧ್ಯಕ್ಷರು ನೆರೆದಿದ್ದ ಸದಸ್ಯರನ್ನು ಸ್ವಾಗತಿಸಿ ಮಾತನಾಡಿ, ಕೇರಿಯ ಸದಸ್ಯರು ಕಷ್ಟ-ಸುಖಗಳಲ್ಲಿ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಕೊಡವರ ಆಚಾರ - ವಿಚಾರ, ಪದ್ಧತಿ ಪರಂಪರೆಗಳನ್ನು ಉಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು. ಕೊಡವ ಭಾಷೆಯ ಪುಸ್ತಕಗಳನ್ನು ಓದಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಕೇರಿಯ ಹಿರಿಯ ಸದಸ್ಯರಾದ ಕುಪ್ಪಂಡ ತಿಮ್ಮಯ್ಯ, ಬಯವಂಡ ರೋಹಿಣಿ ದೇವಯ್ಯ ಮತ್ತು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಕೂಪದಿರ ಸುನಿತಾ ಮುತ್ತಣ್ಣ ಕಾರ್ಯಕ್ರಮ ನಿರೂಪಿಸಿದರು. ರಸಪ್ರಶ್ನೆ ಮತ್ತು ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಭೆಯಲ್ಲಿ ಚೇಂದ್ರಿಮಾಡ ಗಾನವಿ ವಿನು ಪ್ರಾರ್ಥನೆ ಮಾಡಿದರು. ಕಾರ್ಯದರ್ಶಿ ಕೋಡಿರ ರತನ್ ದೇವಯ್ಯ ವರದಿ ವಾಚನ ಮಾಡಿದರು. ಬಲ್ಲಾರಂಡ ಮಲ್ಲಿಗೆ ಚಿಣ್ಣಪ್ಪ ವಂದನಾರ್ಪಣೆ ಮಾಡಿದರು.