ಕುಶಾಲನಗರ, ಜ. ೨೬: ಗುರುಗಳಿಗೆ ಪುಸ್ತಕ ರೂಪದಲ್ಲಿ ಗುರು ಕಾಣಿಕೆ ನೀಡುತ್ತಿರುವ ಹಳೆ ವಿದ್ಯಾರ್ಥಿಗಳ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು “ಶಕ್ತಿ'' ಸಲಹಾ ಸಂಪಾದಕ ಹಾಗೂ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ. ಅನಂತಶಯನ ಹೇಳಿದರು.

ನಿವೃತ್ತ ಮುಖ್ಯೋಪಾಧ್ಯಾಯರಾದ ಸೂದನ ಎಸ್. ಗೋಪಾಲ್ ಅವರಿಗೆ ಹಳೆಯ ವಿದ್ಯಾರ್ಥಿಗಳು ಅರ್ಪಿಸಿದ ಕ್ರಿಯಾ ತಪಸ್ವಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಳೆ ವಿದ್ಯಾರ್ಥಿಗಳ ಕಾರ್ಯಕ್ರಮ ಸಂಘಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಗುರು ಶಿಷ್ಯ ಸಂಬAಧದ ಬಗ್ಗೆ ವ್ಯಾಖ್ಯಾನಿಸಿ ಪುಸ್ತಕದಲ್ಲಿ ವಿದ್ಯಾರ್ಥಿಗಳು ಪ್ರಕಟಿಸಿರುವ ಲೇಖನಗಳ ಬಗ್ಗೆ ವಿಮರ್ಶಿಸಿದರು.

ಪುಸ್ತಕ ಬಿಡುಗಡೆಗೊಳಿಸಿದ ಲೋಕಾಯುಕ್ತ ಎಸ್‌ಪಿ ದಿನೇಶ್ ಕುಮಾರ್ ಮಾತನಾಡಿ, ಜೀವನ ರೂಪಿಸುವ ಶಿಕ್ಷಕರಿಗೆ ವಿದ್ಯಾರ್ಥಿಗಳಿಂದ ನಿರಂತರ ಗೌರವ ಸಲ್ಲಬೇಕು. ಗುರುಗಳು ವಿದ್ಯಾರ್ಥಿಗಳ ಜೀವನಕ್ಕೆ ಪ್ರೇರಣೆಯಾಗುತ್ತಾರೆ. ಶಿಕ್ಷಕರು ಉತ್ತಮ ಕರ್ತವ್ಯ ನಿರ್ವಹಣೆ ಮಾಡುವ ಮೂಲಕ ಜೀವನದಲ್ಲಿ ಸಾರ್ಥಕತೆ ಪಡೆಯಲು ಸಾಧ್ಯ ಎಂದರು.

ಈ ಸಂದರ್ಭ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯರಾದ ಸೂದನ ಎಸ್ ಗೋಪಾಲ್, ಶಿಕ್ಷಕರ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರಲ್ಲದೆ ವೃತ್ತಿ ಧರ್ಮಕ್ಕೆ ಯಾವುದೇ ಸಂದರ್ಭದಲ್ಲೂ ಮೋಸ ಮಾಡಬಾರದು ಮಕ್ಕಳಲ್ಲಿ ಜೀವನದ ಮೌಲ್ಯ ಬೆಳೆಸುವ ಕೆಲಸವಾಗಬೇಕು ಎಂದರು.

ಈ ಸಂದರ್ಭ ವೇದಿಕೆಯಲ್ಲಿ ದೇವಕಿ ಗೋಪಾಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಪೋಷಕರು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು. ಹಳೆ ವಿದ್ಯಾರ್ಥಿ ಹಾಗೂ ಪುಸ್ತಕದ ಸಂಪಾದಕರಾದ ಹರಿಣಿ ಬಿ.ಕೆ. ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.