ಮಡಿಕೇರಿ, ಜ. ೨೬: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಭೋಸರಾಜ್ ಅವರ ಪ್ರವಾಸ ಕಾರ್ಯಕ್ರಮ ಇಂದು ನಿಗದಿಯಾಗಿತ್ತು. ಅಧಿಕೃತವಾದ ಪ್ರವಾಸದ ವಿವರದಲ್ಲಿ ಇದ್ದದ್ದು ಬೆಳಿಗ್ಗೆ ೯ಕ್ಕೆ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಹಾಗೂ ನಂತರದಲ್ಲಿ ಮೈತ್ರಿ ಪೊಲೀಸ್ ಸಮುದಾಯ ಭವನದ ಸನಿಹದಲ್ಲಿ ಕಾಮಗಾರಿಯೊಂದರ ಶಂಕುಸ್ಥಾಪನೆಯಲ್ಲಿ ಪಾಲ್ಗೊಳ್ಳುವುದು ಎಂದಷ್ಟೇ ಇತ್ತು. ಆದರೆ ಗಣರಾಜ್ಯೋತ್ಸವ ಕಾರ್ಯಕ್ರಮವಾದ ನಂತರ ಸಚಿವರು ನಗರದ ಗಾಂಧಿ ಮೈದಾನಕ್ಕೆ ತೆರಳಿದರು. ಅಲ್ಲಿ ನಾಳೆಯಿಂದ ಆರಂಭಗೊಳ್ಳಲಿರುವ ಜಿಲ್ಲಾಮಟ್ಟದ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಇಂದೇ ಚಾಲನೆ ನೀಡಲಾಯಿತು.
ಇದಾದ ಬಳಿಕ ರಾಜಾಸೀಟ್ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ದಿಢೀರ್ ಭೇಟಿ ಹಮ್ಮಿಕೊಳ್ಳಲಾಯಿತು. ನಂತರದಲ್ಲಿ ಮೈತ್ರಿ ಬಳಿ ಅಧಿಕೃತ ವಿವರದಂತೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಇದಾದ ಬಳಿಕ ಸಚಿವರ ಭೇಟಿ ಮತ್ತೊಮ್ಮೆ ಜನರಲ್ ತಿಮ್ಮಯ್ಯ ಕ್ರೀಡಾಂಗಣದತ್ತ ಸಾಗಿತು. ಅಲ್ಲಿ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಇಲಾಖೆ ವತಿಯಿಂದ ನಿರ್ಮಿಸಲು ಉದ್ದೇಶಿಸಲಾಗಿರುವ ಮಹಿಳಾ ವಸತಿ ಗೃಹದ ಉದ್ಘಾಟನೆ ಕಾರ್ಯಕ್ರಮ ದಿಢೀರ್ ಸೇರ್ಪಡೆಗೊಂಡಿತ್ತು. ಇದು ಮುಗಿದ ಬಳಿಕ ಸುಮಾರು ೨ ಗಂಟೆ ವೇಳೆಗೆ ಸಚಿವರ ಪ್ರಯಾಣ ಕಾವೇರಿ ಹಾಲ್ನತ್ತ ಸಾಗಿತು. ಅಲ್ಲಿಯೂ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡರು. ನಿಗದಿತ ಕಾರ್ಯಕ್ರಮವಾದ ಬದಲು ಇನ್ನಿತರ ಕಡೆಗಳಿಗೆ ಸಚಿವರು ತೆರಳುವುದು ದಿಢೀರ್ ತೀರ್ಮಾನದಂತಿತ್ತು. ಇದರಿಂದಾಗಿ ಪೊಲೀಸರು ಸಂಚಾರ ವ್ಯವಸ್ಥೆಯನ್ನು ಸಚಿವರು ತೆರಳಿದ ಹಾದಿಯಲ್ಲಿ ಸುಗಮಗೊಳಿಸಲು ಬೆಂಗಾವಲು ಪಡೆಯೊಂದಿಗೆ ಒಂದಷ್ಟು ತರಾತುರಿ ಅನುಭವಿಸಬೇಕಾಯಿತು. ಅಲ್ಲದೆ ಮಾಹಿತಿ ಇಲ್ಲದ ಸಾರ್ವಜನಿಕ ವಾಹನ ಪ್ರಯಾಣಿಕರು ಇದೇನಪ್ಪ ಎಂದು ಹುಬ್ಬೇರಿಸುವಂತಾಗಿತ್ತು. -(ಎಸ್.ಎಸ್)