ಜಿ.ಆರ್. ಪ್ರಜ್ವಲ್
ಮಡಿಕೇರಿ, ಜ. ೨೭: "ಷೇರುಪೇಟೆಯಲ್ಲಿ ಹಣ ಹೂಡಿಕೆ ಮಾಡಿ, ಬೃಹತ್ ಶೇಕಡದಲ್ಲಿ ಲಾಭಾಂಶ ನಿಮಗೆ ಬರಲಿದೆ" ಎಂಬ ಭರವಸೆ ನೀಡಿ ಜಿಲ್ಲೆಯ ವಿದ್ಯಾವಂತ ಹಾಗೂ ಉತ್ತಮ ಉದ್ಯೋಗದಲ್ಲಿರುವ ಜನತೆಯಿಂದ ಲಕ್ಷ, ದಶಲಕ್ಷ ಮಾತ್ರವಲ್ಲದೆ ೧ ಕೋಟಿವರೆಗೂ ಹಣವನ್ನು ಸೈಬರ್ ವಂಚಕರು ವಸೂಲಿ ಮಾಡುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದ್ದು, ವರ್ಷ ಪ್ರಾರಂಭವಾಗಿ ಒಂದು ತಿಂಗಳು ಕಳೆಯುವ ಮುನ್ನವೇ ೧೧ ಇಂತಹ ಪ್ರಕರಣಗಳು ಮಡಿಕೇರಿಯಲ್ಲಿರುವ ಕೊಡಗು ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಇದಲ್ಲದೆ ಪಾರ್ಟ್ ಟೈಮ್ ಕೆಲಸ ಕೊಡಿಸುವುದಾಗಿ ನಂಬಿಸಿ ಗೃಹಿಣಿಯರನ್ನೇ ಗುರಿಯಾಗಿಸಿಕೊಂಡು ವಂಚಕರು ಲಕ್ಷ-ಲಕ್ಷ ಮೊತ್ತದಲ್ಲಿ ಹಣ ವಂಚನೆ ನಡೆಸುತ್ತಿದ್ದಾರೆ. ಅಪರಿಚಿತ ಸಂಖ್ಯೆಯಿAದ ಬಂದ ಆ್ಯಪ್ ಇನ್ಸ್ಟಾಲ್ ಮಾಡಿ ಮೋಸ ಹೋಗಿದ್ದಲ್ಲದೇ ಫೇಸ್‌ಬುಕ್‌ನಲ್ಲಿ ಪರಿಚಿತ ವ್ಯಕ್ತಿಗಳಿಂದಲೂ ಜನರು ಹಣ ಕಳೆದುಕೊಂಡಿದ್ದಾರೆ.
ಈ ೧೧ ಪ್ರಕರಣಗಳಲ್ಲಿ ಜನರು ಒಟ್ಟು ಕಳೆದುಕೊಂಡ ಮೊತ್ತ ಬರೋಬ್ಬರಿ ರೂ.೨ ಕೋಟಿ ೪೪ ಲಕ್ಷ ೪೨ ಸಾವಿರ ಆಗಿರುವುದು ಕುಳಿತಲ್ಲೇ ಹಣ ಲಪಟಾಯಿಸುತ್ತಿರುವ ವಂಚಕರ ಪತ್ತೆ ಕಾರ್ಯ ಇನ್ನೂ ತನಿಖೆಯಲ್ಲಿಯೇ ಉಳಿದಿದೆ.
ಪ್ರಕರಣಕ್ಕೆ ಒಳಗಾಗಿರುವ ಬಹುತೇಕ ಎಲ್ಲರೂ ವಿದ್ಯಾವಂತರಾಗಿದ್ದು ಹೂಡಿಕೆಯಿಂದ ಲಾಭಾಂಶ ಪಡೆಯುವ ಹಣದಾಸೆಗೆ ಸಿಲುಕಿ ಮೋಸ ಹೋಗುತ್ತಿದ್ದಾರೆ. ವಿದ್ಯಾವಂತರಾಗಿರುವ ಉಪನ್ಯಾಸಕರು, ಸಂಸ್ಥೆಯ ವ್ಯವಸ್ಥಾಪಕರು, ಸರಕಾರಿ ನೌಕರರು, ಶಿಕ್ಷಕರು, ಉದ್ಯಮಿಗಳು ಕೂಡ ಈ ಪ್ರಕರಣಗಳಲ್ಲಿ ವಂಚನೆಗೆ ಒಳಗಾಗುತ್ತಿದ್ದಾರೆ.
ರೂ.೧.೧೪ ಕೋಟಿ ಕಳೆದುಕೊಂಡ ಉದ್ಯೋಗಿ
ಹೂಡಿಕೆ ಮೂಲಕ ಲಾಭಾಂಶ ಪಡೆಯುವ ವಂಚನೆ ಜಾಲಕ್ಕೆ ಹೊಸದಾಗಿ ಬಲೆಗೆ ಬಿದ್ದಿರುವ ಪಾಲಿಬೆಟ್ಟದ ಖಾಸಗಿ ತೋಟದ ಸಹಾಯಕ ವ್ಯವಸ್ಥಾಪಕರಾದ ಉದಯ ನಾರಾಯಣ ಎಂಬವರು, ಬರೋಬ್ಬರಿ ರೂ.೧ ಕೋಟಿ ೧೪ ಲಕ್ಷ ಕಳೆದುಕೊಂಡಿದ್ದಾರೆ. ಈ ಸಂಬAಧ ತಾ.೨೬ ರಂದು ಕೊಡಗು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ನವೆಂಬರ್ ತಿಂಗಳಲ್ಲಿ ಉದಯ ಅವರು ಯೂಟ್ಯೂಬ್ ವೀಡಿಯೋ ವೀಕ್ಷಿಸುತ್ತಿದ್ದಾಗ ಪ್ರದರ್ಶನಗೊಂಡ ಜಾಹೀರಾತು ಲಿಂಕ್ ಅನ್ನು ಒತ್ತಿದ್ದಾರೆ. ಕೆಲ ಹೊತ್ತಿನಲ್ಲಿ ಅಪರಿಚಿತರಿಂದ ಇವರಿಗೆ ಕರೆ ಬಂದು ಸಂಸ್ಥೆಯೊAದರ ಹೆಸರು ಹೇಳಿ ಆ ಸಂಸ್ಥೆಗೆ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿ ಆ ಸಂಬAಧ ವಾಟ್ಸಾö್ಯಪ್ ಗುಂಪಿಗೆ ಉದಯ ಅವರನ್ನು ಸೇರಿಸಲಾಗಿದೆ. ಆ ಗುಂಪಿನಲ್ಲಿ ಬ್ಯಾಂಕ್ ಖಾತೆ ವಿವರ ಪ್ರದರ್ಶಿಸಿ ಹಣ ಹೂಡಿಕೆ ಮಾಡಿದರೆ ಬೃಹತ್ ಲಾಭಾಂಶ ದೊರಕುವುದಾಗಿಯೂ ಸಂದೇಶ ಪ್ರದರ್ಶಿಸಲಾಗಿದೆ. ಇದನ್ನು ನಂಬಿದ ಉದಯ ಅವರು ಹಂತ ಹಂತವಾಗಿ ರೂ.೧ ಕೋಟಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ೧೪ ಲಕ್ಷ ಹಣವನ್ನು ಆ ಖಾತೆಗೆ ವರ್ಗಾಯಿಸಿದ್ದಾರೆ. ಅದಾಗ್ಯೂ ಲಾಭಾಂಶ ಬರದಿದ್ದಾಗ ಹಾಗೂ ಅವರನ್ನು ಗ್ರೂಪ್‌ಗೆ ಸೇರಿಸಿದ ವ್ಯಕ್ತಿ ಸಂಪರ್ಕಕ್ಕೆ ಸಿಗದಿದ್ದಾಗ ವಂಚನೆಗೆ ಒಳಗಾಗಿರುವುದಾಗಿ ತಿಳಿದು ಬಂದಿದೆ.
ಇದೇ ರೀತಿ ಒಟ್ಟು ೧೧ ಇತರ ಪ್ರಕರಣಗಳು ಈ ತಿಂಗಳು ಕೊಡಗು ಸೆನ್ ಠಾಣೆಯಲ್ಲಿ ದಾಖಲಾಗಿವೆ.
ಕೂತಿ ಗ್ರಾಮದ ಉಪನ್ಯಾಸಕ ಲಾಂಚನ್ ಎಂಬವರಿಗೆ ಟೆಲಿಗ್ರಾಂ ಮೂಲಕ ಸೈಬರ್ ಕಳ್ಳರು ಹಣ ಹೂಡಿಕೆ ಚಾನೆಲ್‌ಗೆ ಸೇರಿಸಿ ಹಂತ ಹಂತವಾಗಿ ಹಣವನ್ನು ಪಡೆದು ಲಾಭಾಂಶ ದೊರಕುವ ನಂಬಿಕೆಯನ್ನು ನೀಡಿದ್ದಾರೆ. ಹಂತ ಹಂತವಾಗಿ ಒಟ್ಟು ರೂ.೭.೭೩ ಲಕ್ಷ ಪಾವತಿಸಿದ ಬಳಿಕ ಯಾವುದೇ ಲಾಭಾಂಶ ದೊರಕದೆ ಲಾಂಚನ್ ಅವರು ವಂಚನೆಗೆ ಒಳಗಾಗಿದ್ದಾರೆ. ಕಳೆದ ಆಗಸ್ಟ್ನಲ್ಲಿ ಈ ಘಟನೆ ಸಂಭವಿಸಿದ್ದು, ಜನವರಿ ೩ ರಂದು ಕೊಡಗು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಡಿಕೇರಿಯ ನಿವಾಸಿ ಸರಕಾರಿ ನೌಕರರಾಗಿ ಕೆಲಸ ನಿರ್ವಹಿಸುತ್ತಿರುವ ಹರೀಶ ಎಂಬವರು, ಟೆಲಿಗ್ರಾಂನಲ್ಲಿ ಬಂದ ಹಣ ಹೂಡಿಕೆ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ. ರೂ.೨,೦೦೦ ಹೂಡಿಕೆ ಮಾಡಿ ೨,೮೦೦ ಪಡೆದು ೮೦೦ ಲಾಭಾಂಶ ಕೂಡ ಗಳಿಸಿದ್ದಾರೆ. ಬಳಿಕ ಅವರನ್ನು ಟೆಲಿಗ್ರಾಂ ಗ್ರೂಪ್ ಒಂದಕ್ಕೆ ಸೇರಿಸಲಾಗಿದೆ. ಇದರಲ್ಲಿನ ಗ್ರೂಪ್ ಸದಸ್ಯರು ಹೂಡಿಕೆ ಮಾಡುವಂತೆ ಒತ್ತಾಯಿಸಿ ಹೂಡಿಕೆ ಮಾಡಬೇಕಾದ ಖಾತೆ ವಿವರ ನೀಡಿದ್ದಾರೆ. ಹಂತ ಹಂತವಾಗಿ ಹರೀಶ ಅವರು ರೂ.೧೦.೩೩ ಲಕ್ಷ ಹಣ ಪಾವತಿಸಿ ಮೋಸ ಹೋಗಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಈ ಘಟನೆ ನಡೆದಿದ್ದು, ತಾ.೧೫ ರಂದು ಪ್ರಕರಣ ದಾಖಲಾಗಿದೆ.
ಕೆ.ನಿಡುಗಣೆಯ ಗೃಹಿಣಿ ಲಿಖಿತಾ ಎಂಬವರು ಟೆಲಿಗ್ರಾಂನಲ್ಲಿನ ಲಿಂಕ್ ಕ್ಲಿಕ್ ಮಾಡಿ ‘ಪಾರ್ಟ್ ಟೈಮ್’ ಕೆಲಸದ ಭರವಸೆಗೆ ಮೋಸ ಹೋಗಿ ಹಂತ ಹಂತವಾಗಿ ರೂ.೩೨.೮೬ ಲಕ್ಷ ಕಳೆದುಕೊಂಡಿದ್ದಾರೆ. ಜುಲೈನಲ್ಲಿ ಈ ಕೃತ್ಯ ನಡೆದಿದ್ದು, ಜನವರಿಯಲ್ಲಿ ಪ್ರಕರಣ ದಾಖಲಾಗಿದೆ.
ಮಡಿಕೇರಿಯ ಕೃಷಿಕ ರಕ್ಷಿತ್ ಎಂಬವರಿಗೆ ವಾಟ್ಸಾö್ಯಪ್ ಮೂಲಕ ಕರೆ ಮಾಡಿದ ಒಬ್ಬರು ಷೆೆÃರ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದಾರೆ. ಸಂಸ್ಥೆಯ ವಾಟ್ಸಾö್ಯಪ್ ಗ್ರೂಪ್‌ಗೆ ಸೇರಿ ಆ ಮೂಲಕ ಅಲ್ಲಿ ನೀಡಲಾದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಲಾಭಾಂಶ ಪಡೆಯುವ ನಂಬಿಕೆಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ನವೆಂಬರ್ ಹಾಗೂ ಡಿಸೆಂಬರ್ ಅವಧಿಯಲ್ಲಿ ಒಟ್ಟು ರೂ.೨೭ ಲಕ್ಷ ಹಣ ಪಾವತಿಸಿ ಮೋಸ ಹೋಗಿದ್ದಾರೆ. ಜನವರಿ ೧೩ ರಂದು ಈ ಸಂಬAಧ ಪ್ರಕರಣ ದಾಖಲಾಗಿದೆ.
ಮಡಿಕೇರಿಯ ನಾಝಿಯಾ ಎಂಬವರು ಇನ್ಸ್ಟಾಗ್ರಾಂನಲ್ಲಿನ ಫರ್ನೀಚರ್ ಜಾಹೀರಾತೊಂದನ್ನು ವೀಕ್ಷಿಸಿ ಅಲ್ಲಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಫರ್ನೀಚರ್ ಬುಕ್ ಮಾಡಲು ಬಯಸಿದ್ದಾರೆ. ಮುಂಗಡ ಹಣ ಪಾವತಿಸುವಂತೆ ಖದೀಮರು ಒತ್ತಾಯಿಸಿದ್ದು, ೨೦೨೪ರ ಜುಲೈ ಹಾಗೂ ಆಗಸ್ಟ್ ತಿಂಗಳ ಅವಧಿಯಲ್ಲಿ ಒಟ್ಟು ರೂ.೨.೧೫ ಲಕ್ಷ ಪಾವತಿಸಿದ ಬಳಿಕ ಜಾಹೀರಾತುದಾರರಿಂದ ಯಾವುದೇ ಪ್ರತಿಕ್ರಿಯೆ ದೊರಕದೆ ಮೋಸಹೋಗಿದ್ದಾರೆ. ತಾ. ೧೫ ರಂದು ಪ್ರಕರಣ ದಾಖಲಾಗಿದೆ.
ಶನಿವಾರಸಂತೆಯ ಗೃಹಿಣಿ ರಶ್ಮಿ ಎಂಬವರಿಗೆ ಇನ್ಸ್ಟಾಗ್ರಾಂ ಮೂಲಕ ‘ಪಾರ್ಟ್ ಟೈಮ್’ ಕೆಲಸದ ಭರವಸೆ ನೀಡಿ ಲಿಂಕ್ ಬಂದಿದ್ದು, ತಮ್ಮ ಮಾಹಿತಿಯನ್ನು ಲಿಂಕ್ ಮೂಲಕ ಹಂಚಿಕೊAಡಿದ್ದಾರೆ. ಬಳಿಕ ಅವರ ಸಂಖ್ಯೆಗೆ ವಾಟ್ಸಾö್ಯಪ್ ಮೂಲಕ ಕೆಲಸದ ಲಿಂಕ್ ಬಂದಿದ್ದು, ಟೆಲಿಗ್ರಾಂ ಗ್ರೂಪ್‌ಗೆ ಖದೀಮರು ಅವರನ್ನು ಸೇರಿಸಿದ್ದಾರೆ. ಈ ಗುಂಪಿನಲ್ಲಿ ಕೆಲವೊಂದು ಕೆಲಸಗಳನ್ನು (ಗೂಗಲ್ ರಿವ್ಯೂವ್ ಇತ್ಯಾದಿ) ನೀಡಿ ಪೂರೈಸಿದ ಬಳಿಕ ರೂ.೧೦೦ ಪಾವತಿ ಕೂಡ ಮಾಡಿದ್ದಾರೆ. ನಂತರದಲ್ಲಿ ಹಣ ಹೂಡಿಕೆ ಮಾಡಿ ಅಧಿಕ ಲಾಭಾಂಶ ಪಡೆಯುವಂತೆ ಒತ್ತಾಯಿಸಿದ್ದು, ರಶ್ಮಿ ಅವರು ಹಂತ ಹಂತವಾಗಿ ಕಳೆದ ನವೆಂಬರ್‌ನಿAದ ಈ ವರ್ಷ ಜನವರಿವರಿಗೆ ಒಟ್ಟು ರೂ.೧೭.೦೬ ಲಕ್ಷ ವರ್ಗಾವಣೆ ಮಾಡಿ ಮೋಸ ಹೋಗಿದ್ದಾರೆ.
ನಾಪೋಕ್ಲಿನ ರೆಹಮತ್ ಎಂಬ ಶಿಕ್ಷಕಿ ತಮಗೆ ಟೆಲಿಗ್ರಾಂನಲ್ಲಿ ಬಂದ ಲಿಂಕ್ ಒಂದನ್ನು ಕ್ಲಿಕ್ ಮಾಡಿ ಆ ಮೂಲಕ ಕೆಲ ಟಾಸ್ಕ್ಗಳನ್ನು ಪೂರೈಸಿದ್ದಾರೆ. ಬಳಿಕ ‘ಪಾರ್ಟ್ ಟೈಮ್’ ಕೆಲಸ ನೀಡುವ ಭರವಸೆ ನೀಡಿದ ಖದೀಮರು ಶಿಕ್ಷಕಿಯಿಂದ ಹಂತ ಹಂತವಾಗಿ ಕಳೆದ ಅಕ್ಟೋಬರ್‌ನಿಂದ ಈ ಜನವರಿವರೆಗೆ ರೂ.೭.೪೨ ಲಕ್ಷ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಸೆನ್ ಠಾಣೆಯಲ್ಲಿ ಈ ಸಂಬAಧ ಜನವರಿ ೧೨ ರಂದು ಪ್ರಕರಣ ದಾಖಲಾಗಿದೆ.
ಸೋಮವಾರಪೇಟೆ ಯಡವ ನಾಡಿನ ನಿವಾಸಿ ಸರಕಾರಿ ನೌಕರರಾಗಿರುವ ದೀಲಾಕ್ಷ ಎಂಬವರು ತಮ್ಮ ವಾಟ್ಸಾö್ಯಪ್ ಖಾತೆಗೆ ಅಪರಿಚಿತರಿಂದ ಬಂದ ಎ.ಪಿ.ಕೆ ಲಿಂಕ್ ಅನ್ನು ಕ್ಲಿಕ್ ಮಾಡಿ ಅಪರಿಚಿತ ಆ್ಯಪ್ ಅನ್ನು ತಮ್ಮ ಫೋನಿಗೆ ಇನ್ಸ್ಟಾಲ್ ಮಾಡಿದ್ದಾರೆ. ಈ ಮೂಲಕ ಒಟ್ಟು ರೂ.೨.೩೬ ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಈ ಘಟನೆ ಕೂಡ ಡಿಸೆಂಬರ್‌ನಲ್ಲಿ ನಡೆದಿದ್ದು, ತಾ.೨೦ ರಂದು ಪ್ರಕರಣ ದಾಖಲಾಗಿದೆ.
ಮುತ್ತಾರ್ಮುಡಿಯ ಕೃಷಿಕ ಹಿತೇಶ್ ಎಂಬವರು ಫೇಸ್‌ಬುಕ್ ಮೂಲಕ ಪರಿಚಿತ ವ್ಯಕ್ತಿಗಳಿಂದ ವಂಚನೆಗೆ ಒಳಗಾಗಿ ರೂ.೭.೭೭ ಲಕ್ಷ ಕಳೆದುಕೊಂಡಿದ್ದಾರೆ. ಪರಿಚಿತ ವ್ಯಕ್ತಿಗಳಿಬ್ಬರು ತಮ್ಮ ಅಜ್ಜಿಯ ಚಿಕಿತ್ಸೆಗೆ ಹಣ ಬೇಕೆಂದು, ಚಿಕಿತ್ಸೆ ಬಳಿಕ ಹೆಚ್ಚು ಹಣ ಹಿಂತಿರುಗಿಸುವುದೆAದೂ ಭರವಸೆ ನೀಡಿದ್ದಾರೆ. ಇವರನ್ನು ನಂಬಿ ಹಿತೇಶ್ ಅವರು ತಾ.೧೭ ರಿಂದ ೧೯ ರವರೆಗೆ ಹಂತ ಹಂತವಾಗಿ ರೂ.೭.೭೭ ಲಕ್ಷ ಹಣ ಪಾವತಿಸಿದ್ದಾರೆ. ಪರಿಚಿತರಿಂದ ಪ್ರತಿಕ್ರಿಯೆ ಬಾರದೇ ಇದ್ದರಿಂದ ತಾ.೨೨ ರಂದು ಸೆನ್ ಠಾಣೆಗೆ ದೂರು ನೀಡಿದ್ದಾರೆ. ವೀರಾಜಪೇಟೆ ಕಾಕೋಟುಪರಂಬು ನಿವಾಸಿ ವೀಣಾ ಎಂಬವರು, ಫೇಸ್‌ಬುಕ್ ಮೂಲಕ ಪರಿಚಿತರಾದ ಒಬ್ಬರಿಂದ ವಂಚನೆಗೆ ಒಳಗಾಗಿದ್ದಾರೆ. ಇಂಗ್ಲೆAಡ್ ನವರು ಎಂದು ಹೇಳಿಕೊಂಡ ವ್ಯಕ್ತೊಯೊಬ್ಬ ಚಿನ್ನ ಒಳಗೊಂಡ ಗಿಫ್ಟ್ ಪಾರ್ಸಲ್ ಕಳುಹಿಸಿರುವುದಾಗಿ ತಿಳಿಸಿ ಕಸ್ಟಮ್ ಡ್ಯೂಟಿಗೆ ಹಣ ಪಾವತಿಸುವಂತೆ ಹೇಳಿದ್ದಾರೆ. ಹಂತ ಹಂತವಾಗಿ ವೀಣಾ ಅವರು ರೂ.೧೫.೭೧ ಲಕ್ಷ ವಂಚಕನ ಖಾತೆಗೆ ಪಾವತಿಸಿ ಮೋಸ ಹೋಗಿದ್ದಾರೆ. ಘಟನೆ ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದಿದ್ದು, ತಾ.೨೦ ರಂದು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿನ ಜಾಹೀರಾತುಗಳ ಬಗ್ಗೆ ಎಚ್ಚರ ಅಗತ್ಯ
ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಂ, ಫೇಸ್‌ಬುಕ್, ಯೂಟ್ಯೂಬ್, ಟೆಲಿಗ್ರಾಂಗಳಲ್ಲಿ ಎಗ್ಗಿಲ್ಲದೆ ಪರಿಶೀಲನೆಗೆ ಒಳಗಾಗದ ಜಾಹಿರಾತುಗಳು ಪ್ರಸಾರವಾಗುತ್ತವೆ. ಈ ಬಗ್ಗೆ ಪರಿಶೀಲನೆ ನಡೆಸದೆ ಸಾರ್ವಜನಿಕರು ಹೂಡಿಕೆ ಜಾಲ, ಪಾರ್ಟ್ ಟೈಮ್ ಕೆಲಸದ ಸುಳ್ಳು ಭರವಸೆಗಳಿಗೆ ಮೋಸ ಹೋಗುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸುವುದು ಅಗತ್ಯ.