ಸೋಮವಾರಪೇಟೆ, ಜ. ೨೭: ಕಳೆದ ಹಲವು ದಶಕಗಳ ಬೇಡಿಕೆಯಾಗಿದ್ದ, ಚುನಾವಣಾ ಬಹಿಷ್ಕಾರದ ನಿರ್ಧಾರಕ್ಕೂ ಕಾರಣವಾಗಿದ್ದ ಅಬ್ಬೂರುಕಟ್ಟೆ- ನೇರಳೆ ಸಂಪರ್ಕ ರಸ್ತೆ ಅಭಿವೃದ್ಧಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ ನೀಡಿದರು.

ಅಬ್ಬೂರುಕಟ್ಟೆ ಗ್ರಾಮದ ಮುಖ್ಯರಸ್ತೆಯಿಂದ ನೇರಳೆ ಗ್ರಾಮ ಸಂಪರ್ಕ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣಗೊಂಡು ಸಂಚಾರ ದುಸ್ತರವಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಅನೇಕ ಬಾರಿ ಮನವಿ ಮಾಡಿದ್ದರೂ ಬೃಹತ್ ಮೊತ್ತದ ಅನುದಾನ ಲಭಿಸಿರಲಿಲ್ಲ. ಹೀಗಾಗಿ ಚುನಾವಣೆಯ ಬಹಿಷ್ಕಾರಕ್ಕೂ ಮುಂದಾಗಿದ್ದರು.

ಇದೀಗ ಶಾಸಕ ಡಾ. ಮಂತರ್ ಅವರು ರಸ್ತೆ ಅಭಿವೃದ್ಧಿಗೆ ರೂ. ೪೦ಲಕ್ಷ ಅನುದಾನ ಒದಗಿಸಿದ್ದು, ಭೂಮಿಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭ ಗ್ರಾಮಸ್ಥರು ಶಾಸಕರನ್ನು ಅಭಿನಂದಿಸಿದರು.

ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಡಾ.ಮಂತರ್ ಗೌಡ, ರಾಜ್ಯ ಸರ್ಕಾರ ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಅನುದಾನ ಒದಗಿಸುತ್ತಿದ್ದು, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡುತ್ತಿದೆ ಎಂದರು.

ರಸ್ತೆ ಕಾಮಗಾರಿಯನ್ನು ಗುಣಮಟ್ಟದಲ್ಲಿ ಕೈಗೊಳ್ಳಬೇಕು ಎಂದು ಪಂಚಾಯತ್ ರಾಜ್ ಇಂಜಿನಿಯರ್ ಉಪ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಜಾಗದ ಅವಶ್ಯಕತೆಯಿದ್ದರೆ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ವಿನೋದ್ ಕುಮಾರ್, ಪ್ರಮುಖರಾದ ಹೆಚ್.ಕೆ. ಲೋಕೇಶ್, ಸಿ.ಎನ್ . ಸತೀಶ್, ಎಸ್.ಎಂ. ಡಿಸಿಲ್ವಾ, ನೇಗಳ್ಳೆ ಮೇಘ,ಗ್ರಾಮ ಸಮಿತಿ ಅಧ್ಯಕ್ಷ ಈರಪ್ಪ ಸೇರಿದಂತೆ ಇತರರು ಇದ್ದರು.