ಸೋಮವಾರಪೇಟೆ, ಜ. ೨೭: ನಿವೃತ್ತ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಸಮೀಪದ ತೋಳೂರು ಶೆಟ್ಟಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ‍್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯನ್ನು ಪರಾಕ್ರಮ ದಿನ ಹಾಗೂ ಹುತಾತ್ಮರ ದಿನವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಸಿ.ಕೆ. ಮಲ್ಲಪ್ಪ ಅವರು ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಸುಭಾಷ್ ಚಂದ್ರ ಬೋಸ್ ದೇಶದ ಸ್ವಾತಂತ್ರ‍್ಯಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಅಪ್ರತಿಮ ದೇಶಭಕ್ತರು ಎಂದು ಬಣ್ಣಿಸಿದರು.
ಅವರ ತ್ಯಾಗ, ಶೌರ್ಯ ಮತ್ತು ನಾಯಕತ್ವ ಯುವ ಪೀಳಿಗೆಗೆ ಸದಾ ಪ್ರೇರಣೆಯಾಗಬೇಕು ಎಂದರು.
ವಿದ್ಯಾರ್ಥಿಗಳಿAದ ಭಾಷಣ, ಭಾವಗೀತೆ, ಕೋಲಾಟ, ನೃತ್ಯ ಹಾಗೂ ಚಿತ್ರಕಲೆ ಸ್ಪರ್ಧೆಗಳು ನಡೆಯಿತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಿ.ಕೆ. ಮಲ್ಲಪ್ಪ ಅವರು ರಚಿಸಿದ ‘ನಾಡ ಹನಿ’ ಕಥಾಸಂಕಲನವನ್ನು ಶಾಲಾ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಲಾಯಿತು. ಸಂಘದ ವತಿಯಿಂದ ಸುಭಾಷ್ ಚಂದ್ರ ಬೋಸ್ ಭಾವಚಿತ್ರ, ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳು ಹಾಗೂ ೨೦೨೬ರ ಕ್ಯಾಲೆಂಡರ್ ವಿತರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಟಿ.ಡಿ. ಮೋಹನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಎಸ್.ಜೆ. ವಾರಿಜಮಣಿ, ಸಂಘದ ಗೌರವ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿ ಶೆಟ್ಟಿ, ಉಪಾಧ್ಯಕ್ಷ ಎಚ್.ಜಿ. ಕುಟ್ಟಪ್ಪ, ಕಾರ್ಯದರ್ಶಿ ಬಿ.ಎಂ. ಆನಂದ, ಖಜಾಂಚಿ ಎಸ್.ಆರ್. ಕೆಂಚೇಗೌಡ, ಸಲಹೆಗಾರ ಎಂ.ಎ. ವೀರಪ್ಪ, ನಿರ್ದೇಶಕ ಟಿ.ಕೆ. ಮಾಚಯ್ಯ ಸೇರಿದಂತೆ ಇತರರು ಇದ್ದರು.