ಸೋಮವಾರಪೇಟೆ, ಜ. ೨೭: ತಾಲೂಕಿನ ಹಂಡ್ಲಿ ಕ್ಲಸ್ಟರ್‌ನ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಕಲಿಕಾ ಹಬ್ಬ ಕಾರ್ಯಕ್ರಮ ಹಾರೆಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸೌಮ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಮೂಡಿಬಂದ ಬಣ್ಣಬಣ್ಣದ ಟೋಪಿಗಳು, ಕಾಗದದಿಂದ ತಯಾರಿಸಿದ ಕ್ರಾಫ್ಟ್ಗಳು ಸೇರಿದಂತೆ ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಪ್ರದರ್ಶಿಸುವ ಹಲವು ಪ್ರದರ್ಶನಗಳು ಗಮನ ಸೆಳೆದವು.

ಅಂದದ ಬರವಣಿಗೆ, ಗಟ್ಟಿ ಓದು, ಜ್ಞಾಪಕ ಪರೀಕ್ಷೆ, ಕಥೆ ಹೇಳುವುದು, ವಿನೋದ ಗಣಿತ, ಪೋಷಕ ವಿದ್ಯಾರ್ಥಿಗಳ ಸಹಸಂಬAಧದ ವಿವಿಧ ಸ್ಪರ್ಧೆಗಳು ನಡೆದವು. ನಿಡ್ತ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳನ್ನು ಹಬ್ಬದ ರೀತಿಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವ ಶಿಕ್ಷಣ ಇಲಾಖೆಯ ಈ ವಿನೂತನ ಕಾರ್ಯಕ್ರಮ ಶ್ಲಾಘನೀಯ. ಕಲಿಕೆಯನ್ನು ಆನಂದಕರವಾಗಿಸುವ ಇಂತಹ ಪ್ರಯತ್ನಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಆಸಕ್ತಿಯನ್ನು ಹೆಚ್ಚಿಸುತ್ತವೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿಯಾದ ಕವಿತಾ ಅವರು ಕಲಿಕೆಯ ಅನಾವರಣಕ್ಕೆ ಇದು ಉತ್ತಮವಾದ ವೇದಿಕೆಯಾಗಿದೆ ಎಂದು ಅಭಿಪ್ರಾಯಿಸಿದರು.

ಹಂಡ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಗಿರೀಶ್ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ಆಯೋಜನೆಯ ಮಹತ್ವ ಮತ್ತು ಇದು ವಿದ್ಯಾರ್ಥಿಗಳಲ್ಲಿ ತರುವ ಸಕಾರಾತ್ಮಕ ಬದಲಾವಣೆಗಳ ಕುರಿತು ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಕವಿತಾ, ಶಿಕ್ಷಕ ಯಶವಂತ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕಾರ್ತಿಕ್, ಯಶೋಧ ಪುಟ್ಟಸ್ವಾಮಿ, ರೋಹಿಣಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಚೈತ್ರ, ಪ್ರೇಮ ಸೇರಿದಂತೆ ಇತರರು ಇದ್ದರು.