ಸಂಪಾಜೆ, ಜ. ೨೯: ಕಾರು ಡಿಕ್ಕಿಯಾದ ಪರಿಣಾಮ ಆಟೋ ಪಲ್ಟಿಯಾಗಿ ಎದುರಿನಿಂದ ಬಂದ ಟಿಪ್ಪರ್‌ಗೆ ಆಟೋ ಚಾಲಕ ಸಿಲುಕಿ ದುರ್ಮರಣಕ್ಕೀಡಾದ ಘಟನೆ ಸಂಪಾಜೆ ಬಳಿಯ ಚೆಡಾವಿನಲ್ಲಿ ಸಂಭವಿಸಿದೆ.

ಸಂಪಾಜೆ ಗೇಟಿನಿಂದ ಚೆಡಾವು ಕಡೆ ಆಟೋ ರಿಕ್ಷಾ ತೆರಳುತ್ತಿದ್ದ ಸಂದರ್ಭ ಸಂಪಾಜೆ ಪೆಟ್ರೋಲ್ ಪಂಪ್ ಬಳಿಯ ತಿರುವಿನಲ್ಲಿ ಕಾರು ಗುದ್ದಿ ಅಲ್ಲಿಂದ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಈ ವೇಳೆ ಮುಂಭಾಗದಿAದ ಬರುತ್ತಿದ್ದ ಟಿಪ್ಪರ್ ಲಾರಿಯ ಚಕ್ರಕ್ಕೆ ಸಿಲುಕಿ ಆಟೋ ಚಾಲಕ ದಿ. ಬಿಸಿಲುಮನೆ ರಾಮಣ್ಣ ಗೌಡರ ಪುತ್ರ ಸುಂದರ ಚಿಟ್ಟಿಕ್ಕಾನ (೫೬) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ವೇಳೆ ಆಟೋದಲ್ಲಿದ್ದ ಪ್ರಯಾಣಿಕ ಮಹಿಳೆಗೂ ಗಾಯಗಳಾಗಿ ಚಿಕಿತ್ಸೆಗೆ ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಂದರ ಅವರು ಸಂಪಾಜೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಮತ್ತು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಕ್ರಿಯರಾಗಿದ್ದವರು.

ಗ್ರಾ.ಪಂ. ಸದಸ್ಯೆ ಅನಿತಾ ಅವರ ತಾಯಿ ಪದ್ಮಾವತಿ ಅವರನ್ನು ಚಡಾವು ಬಳಿಯ ಅವರ ಮನೆಗೆ ಬಿಡಲು ಸಂಪಾಜೆಯಿAದ ಚಡಾವು ಕಡೆಗೆ ರಿಕ್ಷಾದಲ್ಲಿ ಬಾಡಿಗೆಗೆ ಹೋಗುತ್ತಿದ್ದರು. ಈ ವೇಳೆ ಹಿಂದಿನಿAದ ಅತಿವೇಗದಿಂದ ಬಂದ ಕಾರು ಆಟೋಗೆ ಗುದ್ದಿಕೊಂಡು ನಿಲ್ಲಿಸದೆ ಮಡಿಕೇರಿ ಕಡೆಗೆ ಪರಾರಿಯಾಗಿದೆ. ಅಪಘಾತಕ್ಕೆ ಕಾರಣವಾದ ಕಾರು ಚಾಲಕನನ್ನು ಕ್ಷಣಾರ್ಧದಲ್ಲಿ ಪೊಲೀಸರು ಬಂಧಿಸಿದ್ದಾರೆ. ಗೂಗಲ್ ಮ್ಯಾಪ್ ನೋಡಿಕೊಂಡು ಕಾರು ಚಲಾಯಿಸುತ್ತಿದ್ದದೇ ಘಟನೆಗೆ ಕಾರಣ ಎನ್ನಲಾಗಿದೆ. ಮೈಸೂರು ಮೂಲದ ಚಾಲಕನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತರು ಪತ್ನಿ, ಪುತ್ರ ಭೂ ಸೇನೆಯಲ್ಲಿ ಯೋಧರಾಗಿರುವ ದೇವಿ ಪ್ರಸಾದ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.