ಸಿದ್ದಾಪುರ, ಜ. ೨೯: ಹಾಡಹಗಲೇ ಕಾಡಾನೆ ದಾಳಿಗೆ ಕಾರ್ಮಿಕ ಬಲಿಯಾಗಿರುವ ಘಟನೆ ಬಾಡಗ-ಬಾಣಂಗಾಲ ಗ್ರಾಮದ ಕೌರಿ ಬೆಟ್ಟ ಕಾಫಿ ತೋಟದೊಳಗೆ ನಡೆದಿದೆ. ಬಾಡಗ-ಬಾಣಂಗಾಲ ಗ್ರಾಮದ ಹುಂಡಿಯ ನಿವಾಸಿ ಅಬ್ದುಲ್ ಲತೀಫ್ (೭೨) ಮೃತ ದುರ್ದೈವಿ.
ಹುಂಡಿಯ ನಿವಾಸಿ ಲತೀಫ್ ಅವರು ಕಳೆದ ಹಲವು ವರ್ಷಗಳಿಂದ ಸಿದ್ದಾಪುರದ ಸಮೀಪದ ಕೌರಿಬೆಟ್ಟ ಕಾಫಿ ತೋಟದಲ್ಲಿ ಕಾವಲುಗಾರನಾಗಿ ಕೆಲಸ ಮಾಡಿಕೊಂಡಿದ್ದರು. ಗುರುವಾರದಂದು ಮಧ್ಯಾಹ್ನ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು ಮಧ್ಯಾಹ್ನ ೧ ಗಂಟೆಯ ಸಮಯಕ್ಕೆ ಊಟ ತರಲು ಕಾಫಿ ತೋಟದ ರಸ್ತೆಯಲ್ಲಿ ಬರುತ್ತಿರುವ ಸಂದರ್ಭದಲ್ಲಿ ಏಕಾಏಕಿ ಕಾಫಿ ತೋಟದ ಮೇಲ್ಭಾಗದ ಬೆಟ್ಟದಿಂದ ಒಂಟಿ ಸಲಗ ಹಠಾತ್ತನೆ ಅಬ್ದುಲ್ ಲತೀಫ್ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದೆ.
ಇದೇ ಸಂದರ್ಭದಲ್ಲಿ ಕಾಫಿ ತೋಟದ ಒಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕಾಡಾನೆಯ ದಾಳಿಯನ್ನು ಕಂಡು ದಿಕ್ಕ ಪಾಲಾಗಿ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಾಳಿಯನ್ನು ಕಂಡು ಸ್ಥಳಕ್ಕಾಗಮಿಸಿದ ಸ್ಥಳೀಯ ಕಾರ್ಮಿಕರು ಕೂಡಲೆ ಜೀವನ್ಮರಣ ಸ್ಥಿತಿಯಲ್ಲಿದ್ದ ಲತೀಫ್ ಅವರನ್ನು ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರುವಷ್ಟರಲ್ಲಿ ಅವರು ಜೀವ ಕಳೆದುಕೊಂಡಿದ್ದಾರೆ. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡರು.
ಪ್ರಾಣಾಪಾಯದಿಂದ ಪಾರಾದ ಕಾರ್ಮಿಕ
ಕೌರಿ ಬೆಟ್ಟ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ಕಾವಲುಗಾರ ಲತೀಫ್ ಅವರ ಮೇಲೆ ಕಾಡಾನೆ ದಾಳಿ ನಡೆಸಿದ ಸಂದರ್ಭದಲ್ಲಿ ನೆಲಕ್ಕೆ ಉರುಳಿದ ಲತೀಫ್ ಅವರನ್ನು ರಕ್ಷಣೆ ಮಾಡಲು ಸ್ಥಳದಲ್ಲಿದ್ದ ಮತ್ತೋರ್ವ ಕಾರ್ಮಿಕ ದೀಪಕ್ ಎಂಬವರು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಇದನ್ನು ಕಂಡ ಸಲಗವು ಹಿಂತಿರುಗಿ ಬಂದು ದೀಪಕ್ ಮೇಲೆ ದಾಳಿ ನಡೆಸಲು ಮುಂದಾಗಿದೆ. ಕೂದಲೆಳೆಯ ಅಂತರದಿAದ ಪಾರದ ದೀಪಕ್ ಕಾಡಾನೆ ದಾಳಿಯನ್ನು ತಪ್ಪಿಸಲು ಓಡಿಹೋಗಿ ತೋಟದೊಳಗೆ ಬಿದ್ದು ಕಾಲಿಗೆ ಗಾಯವಾಗಿರುತ್ತದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆ ಹಲವಾರು ಕಾರ್ಮಿಕರ ಮೇಲೆ ದಾಳಿ ನಡೆಸಲು ಯತ್ನಿಸಿದೆ. ಇತ್ತೀಚಿಗಷ್ಟೇ ಬಾಡಗ-ಬಾಣಂಗಾಲ ಗ್ರಾಮದ ಮಠ ನಿವಾಸಿ ದೇವರಾಜ್ ಎಂಬ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿದ್ದ ಘಟನೆ ನಡೆದಿತ್ತು. ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಗ್ರಾಮಸ್ಥರ ಅಕ್ರೋಶ
ಬಾಡಗ-ಬಾಣಂಗಾಲ ಗ್ರಾಮದ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಮಿತಿಮೀರಿರುವ ಕಾಡಾನೆಗಳ ಹಾವಳಿಯಿಂದ ಜನ ಬೇಸತ್ತಿದ್ದಾರೆ. ಅರಣ್ಯ ಇಲಾಖೆ ಸೂಕ್ತ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಮಾಲ್ದಾರೆ ಗ್ರಾಮ ಪಂಚಾಯಿತಿ ಸದಸ್ಯರಾದ ಹನೀಫ್ ಮತ್ತು ಮೊಹಮ್ಮದ್ ಅಲಿ ಮಾತನಾಡಿ, ಈ ಭಾಗದಲ್ಲಿ ಕಾಡಾನೆಗಳು ಹಾಡಹಗಲೇ ರಾಜಾರೋಷವಾಗಿ ಸುತ್ತಾಡುತ್ತಿವೆ. ಅಲ್ಲದೆ ಮಾನವನ ಮೇಲೆ ದಾಳಿ ನಡೆಸುತ್ತಿದೆ. ಗ್ರಾಮಸ್ಥರು ಮನೆಯಿಂದ ಹೊರಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕರು ಕೂಡ ಕೆಲಸಕ್ಕೆ ಬರಲು ಭಯಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಒತ್ತಾಯಿಸಿದರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ತಿತಿಮತಿ ವಲಯ ಹಾಗೂ ವೀರಾಜಪೇಟೆ ವಲಯದ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳು ದಿನನಿತ್ಯ ಕಾಫಿ ತೋಟಗಳಲ್ಲಿ ಸಂಚರಿಸುತ್ತಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ
ಕಾರ್ಮಿಕನ ಮೇಲೆ ಒಂಟಿ ಸಲಗ ದಾಳಿ ನಡೆಸಿದ ಹಿನ್ನೆಲೆಯಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಬೆಂಗಳೂರಿನಿAದ ಅರಣ್ಯ ಇಲಾಖೆ ಅಧಿಕಾರಿ ಶಿವರಾಮ್ ಅವರೊಂದಿಗೆ ಮಾತನಾಡಿ, ಬೀಡುಬಿಟ್ಟಿರುವ ಕಾಡಾನೆಗಳನ್ನು ವೈಜ್ಞಾನಿಕವಾಗಿ ಕಾರ್ಯಾಚರಣೆ ನಡೆಸಿ ಕಾಡಿಗಟ್ಟಲು ಸೂಚಿಸಿದರು.
ಅಲ್ಲದೆ ತುರ್ತು ಪರಿಹಾರವನ್ನು ನೀಡುವಂತೆ ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್ ಹಾಗೂ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಸಿಬ್ಬಂದಿಗಳು ಮತ್ತು ಆರ್ಆರ್ಟಿ. ಆನೆ ಕಾರ್ಯಪಡೆ ಮತ್ತು ತಿತಿಮತಿ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ರಾತ್ರಿ ಸಮಯದಲ್ಲೂ ಕೂಡ ಆನೆಗಳ ಚಲನವಲನ ಕಂಡುಹಿಡಿಯುವ ನಿಟ್ಟಿನಲ್ಲಿ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಅರಣ್ಯ ಅಧಿಕಾರಿ ಶಿವರಾಮ್ ಮಾಹಿತಿ ನೀಡಿದ್ದಾರೆ. ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಿದರು. ಆದರೆ ಕಾಡಾನೆಗಳು ಹಿಂತಿರುಗಿ ಕಾಫಿ ತೋಟಕ್ಕೆ ಲಗ್ಗೆ ಇಡುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ತುರ್ತು ಪರಿಹಾರ
ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ಅಬ್ದುಲ್ ಲತೀಫ್ ಅವರ ಕುಟುಂಬಕ್ಕೆ ತುರ್ತು ಪರಿಹಾರವಾಗಿ ರೂ. ೫ ಲಕ್ಷದ ಚೆಕ್ ಅನ್ನು ವಿತರಿಸಲಾಯಿತು. ಘಟನಾ ಸ್ಥಳಕ್ಕೆ ಎ.ಸಿ.ಎಫ್.ಗಳಾದ ತಾಸಿಂ ಭಾನು, ಮತ್ತು ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. - ವರದಿ : ಎ.ಎನ್.ವಾಸು