ಮಡಿಕೇರಿ, ಜ. ೨೮: ನಾಪೋಕ್ಲು ಸಮೀಪದ ಬೇತು ಗ್ರಾಮದಲ್ಲಿ ಶಾದಿ ಮಹಲ್ ನಿರ್ಮಾಣದ ಜಾಗದ ವಿಚಾರದಲ್ಲಿ ತಲೆದೋರಿರುವ ವಿವಾದ ಹಿನ್ನೆಲೆ ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಸರ್ವೆ ನಡೆಸಿ ಕ್ರಮಕೈಗೊಳ್ಳಲು ಆದೇಶ ಹೊರಡಿಸಿದ್ದಾರೆ.
ಈ ಜಾಗ ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಗೆ ಸೇರಿದೆ ಎಂದು ಶಾಲಾ ಪ್ರಾಂಶುಪಾಲರು ಜಿಲ್ಲಾಡಳಿತಕ್ಕೆ ಪತ್ರ ಬರೆದಿರುವ ಹಿನ್ನೆಲೆ ಸರ್ವೆ ನಂಬರ್ ೧೮/೩ರ ಜಾಗದಲ್ಲಿ ಜಂಟಿ ತಪಾಸಣೆ ನಡೆಸಿ, ಸರ್ವೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ರಚಿಸಿ ಆದೇಶಿಸಿದ್ದಾರೆ. ಮಡಿಕೇರಿ ಉಪವಿಭಾಗದ ಸಹಾಯಕ ಆಯುಕ್ತರು, ಭೂ ದಾಖಲೆಗಳ ಉಪನಿರ್ದೇಶಕರು, ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು, ಸಾರ್ವಜನಿಕ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರು, ಮಡಿಕೇರಿ ತಹಶೀಲ್ದಾರ್, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ, ಜಿಲ್ಲಾ ವಕ್ಫ್ ಅಧಿಕಾರಿಗಳ ತಂಡವನ್ನು ರಚಿಸಿ ಜಂಟಿ ಸರ್ವೆ ನಡೆಸಿ ೧೫ ದಿನದೊಳಗೆ ವರದಿ ನೀಡುವಂತೆ ಸೂಚಿಸಿರುವ ಅಪರ ಜಿಲ್ಲಾಧಿಕಾರಿ, ಮುಂದಿನ ನಿರ್ದೇಶನದವರಗೆ ಪ್ರಸ್ತಾಪಿತ ಜಾಗದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದ್ದಾರೆ.