ಮಡಿಕೇರಿ, ಜ. ೨೮; ಜಿಲ್ಲೆಯ ಏಕೈಕ ನಗರ ಸಭೆಯಾಗಿರುವ ಮಡಿಕೇರಿ ನಗರ ಸಭೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಿರುವ ಕಾಮಗಾರಿ, ಯೋಜನೆಗಳನ್ನು ರೂಪಿಸಲು ಆಯ- ವ್ಯಯ ರಚನೆ ಬಗ್ಗೆ ಸಾರ್ವಜನಿಕರಿಂದ ಸಲಹೆ-ಸೂಚನೆಗಳನ್ನು ಪಡೆಯಲು ಪ್ರತಿ ವರ್ಷ ಸಭೆ ಏರ್ಪಡಿಸಲಾಗುತ್ತದೆ. ಆದರೆ, ಪ್ರತಿ ವರ್ಷ ಕೂಡ ಒಬ್ಬರೇ ಒಬ್ಬರು ವ್ಯಕ್ತಿ ಮಾತ್ರ ಸಭೆಗೆ ಹಾಜರಾಗಿ ತಮ್ಮ ಸಲಹೆ ನೀಡಿ ತೆರಳುತ್ತಾರೆ. ಇಂದಿನ ಸಭೆಗೂ ಕೂಡ ಒಬ್ಬರೇ ಆಗಮಿಸಿದ್ದರು..!

೨೦೨೬-೨೭ನೇ ಸಾಲಿನ ಆಯ-ವ್ಯಯ ರಚನೆ ಹಿನ್ನೆಲೆಯಲ್ಲಿ ನಗರ ಸಭಾಧ್ಯಕ್ಷೆ ಪಿ.ಕಲಾವತಿ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಭೆ ಏರ್ಪಡಿಸಲಾಗಿತ್ತು. ಮಧ್ಯಾಹ್ನ ೩.೩೦ಗಂಟೆಗೆ ಕಾವೇರಿ ಕಲಾಕ್ಷೇತ್ರದಲ್ಲಿ ಸಭೆ ನಿಗದಿಯಾಗಿತ್ತು. ಕತ್ತಲ ಕೂಪವಾಗಿರುವ ಸಭಾಂಗಣದಲ್ಲಿ ಸರಿಯಾಗಿ ೩.೩೦ಕ್ಕೆ ಹಿರಿಯ ನಾಗರಿಕರಾದ ಬೈ.ಶ್ರೀ. ಪ್ರಕಾಶ್ ಹಾಜರಿದ್ದರು. ಕೆಲವು ಚುನಾಯಿತ ಪ್ರತಿನಿಧಿಗಳು, ಮಾಧ್ಯಮದವರು ಇದ್ದರು. ಸಮಯ ನಾಲ್ಕು ಕಳೆದರೂ ಯಾರೂ ಸಭಾಂಗಣದತ್ತ ಸುಳಿಯದ ಹಿನ್ನೆಲೆಯಲ್ಲಿ ಸಭೆ ಆರಂಭಿಸಲಾಯಿತು. ಖಾಲಿ ಕುರ್ಚಿಗಳೇ ಕಂಡುಬAದಾಗ ನಗರ ಸಭಾ ಸಿಬ್ಬಂದಿಗಳನ್ನು ಕರೆಸಿಕೊಳ್ಳಲಾಯಿತು.

ನಂತರ ಆರಂಭವಾದ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ನಗರ ಸಭಾ ಪೌರಾಯುಕ್ತರಾದ ರಮೇಶ್ ಅವರು; ಪ್ರತಿವರ್ಷ ಜನವರಿಯಲ್ಲಿ ಆಯ-ವ್ಯಯ ಮಂಡನೆ ಸಂಬAಧ ಸಾರ್ವಜನಿಕರ ಸಭೆ ಕರೆದು ಸಲಹೆಗಳನ್ನು ಸಂಗ್ರಹಿಸಿ ಅದನ್ನು ಕೌನ್ಸಿಲ್ ಸಭೆಯಲ್ಲಿ ಮಂಡಿಸಿ ಆಯ-ವ್ಯಯ ರಚಿಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಕಳುಹಿಸಲಾಗುವದು. ಸಭೆಯಲ್ಲಿ ಹಾಜರಿರುವವರು ಸಲಹೆಗಳನ್ನು ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ನೀಡುವಂತೆ ಕೋರಿದರು. ಸಭೆಯಲ್ಲಿದ್ದ ಏಕೈಕ ವ್ಯಕ್ತಿ ಬೈ.ಶ್ರೀ. ಪ್ರಕಾಶ್ ಮಾತನಾಡಿ, ನಗರದಲ್ಲಿ ರಸ್ತೆ, ಚರಂಡಿಗಳನ್ನು ಅಗೆದು ಅನಾಗರಿಕ ವರ್ತನೆ ತೋರುತ್ತಿದ್ದು, ಇದನ್ನು ನಿಲ್ಲಿಸಬೇಕೆಂದರು. ಕಾವೇರಿ ಕಲಾಕ್ಷೇತ್ರವನ್ನು ಕೆಡವಿ ಹೊಸ ರೀತಿಯಲ್ಲಿ ನಿರ್ಮಾಣ ಮಾಡಬೇಕು. ನಗರ ಸಭೆಯಿಂದ ಫಾರಂ-೩ ಅನ್ನು ನಿಯಮ ಸರಳೀಕರಣಗೊಳಿಸಿ ಸರಿಯಾದ ಸಮಯಕ್ಕೆ ಒದಗಿಸಬೇಕೆಂದು ಸಲಹೆ ಮಾಡಿದರು. ಸಭೆಯಲ್ಲಿದ್ದ ಮಾಧ್ಯಮದವರು ಸಭೆ ಆಯೋಜನೆ ಮಾಡುವ ಸಂದರ್ಭ ನಗರ ವ್ಯಾಪ್ತಿಯಲ್ಲಿರುವ ವಾಣಿಜ್ಯೋದ್ಯಮಿಗಳ ಸಂಘ, ಲಯನ್ಸ್, ರೋಟರಿ, ಆಟೋ, ವಾಹನ ಚಾಲಕರ ಸಂಘದವರಿಗೆ ಪತ್ರ ಕಳುಹಿಸಿ ಆಹ್ವಾನ ನೀಡಿದರೆ ಒಂದಷ್ಟು ಮಂದಿ ಆಗಮಿಸಬಹುದು, ಜೊತೆಗೆ ಕಸ ಸಾಗಾಟ ಮಾಡುವ ವಾಹನದಲ್ಲಿ ಪ್ರಚುರ ಪಡಿಸಿದರೆ ಜನರಿಗೆ ಮಾಹಿತಿ ತಲಪಲಿದೆ ಎಂದು ಸಲಹೆ ಮಾಡಿದರು. ಒಟ್ಟಾರೆ ಸ್ವಾಗತ, ಪ್ರಾಸ್ತಾವಿಕ, ಸಲಹೆ, ವಂದನೆಗಳನ್ನೊಳಗೊAಡು ೧೦ ನಿಮಿಷದಲ್ಲಿ ಸಭೆ ಮುಕ್ತಾಯ ಕಂಡಿತು. ಒಂದು ರೀತಿಯಲ್ಲಿ ಇಂತಹ ನಗರದ ಅಭಿವೃದ್ಧಿ ಕುರಿತಾಗಿ ಏರ್ಪಡಿಸಲಾಗುವ ಸಭೆಗಳಿಗೆ ನಾಗರಿಕರ ನಿರಾಸಕ್ತಿ ತರವಲ್ಲ ಎಂಬ ಅಭಿಪ್ರಾಯ ವ್ಯಕ್ತಗೊಂಡಿತು.

ಸಭೆಯಲ್ಲಿ ಸಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್‌ಕುಮಾರ್, ಸದಸ್ಯರುಗಳಾದ ಚಂದ್ರಶೇಖರ್, ಸಬಿತಾ, ಶ್ವೇತಾ, ಚಿತ್ರಾವತಿ, ಜಗದೀಶ್, ಮುದ್ದುರಾಜ್, ಜುಲೇಕಾಬಿ ಇದ್ದರು. ನಗರಸಭಾ ಅಧಿಕಾರಿ ತಾಹೀರ್ ಸ್ವಾಗತಿಸಿ, ವಂದಿಸಿದರು.