ಕುಶಾಲನಗರ, ಜ. ೨೮: ಕುಶಾಲನಗರದ ಪುರಸಭೆ ವಾಣಿಜ್ಯ ಸಂಕೀರ್ಣದಲ್ಲಿ ನಿರ್ಮಾಣಗೊಂಡಿರುವ ಅಂಗಡಿ ಮಳಿಗೆಗಳಿಗೆ ದಾಖಲೆ ಪ್ರಮಾಣದ ಬೇಡಿಕೆಯೊಂದಿಗೆ ೧೨ ಮಳಿಗೆಗಳಿಗೆ ಅಂದಾಜು ೪೮೦ಕ್ಕೂ ಅಧಿಕ ಮಂದಿ ಟೆಂಡರ್‌ನಲ್ಲಿ ಪಾಲ್ಗೊಂಡರು.

ಬಹುತೇಕ ಅಂಗಡಿಗಳು ಶೇ.೨೫೦ ರಿಂದ ೩೦೦ಕ್ಕೂ ಅಧಿಕ ಮೊತ್ತದ ಬಾಡಿಗೆಗೆ ಬಿಡ್ ಆಗಿದ್ದು ಇತಿಹಾಸದಲ್ಲಿ ದಾಖಲೆ ನಿರ್ಮಿಸಿದೆ. ಕನಿಷ್ಠ ೬,೫೦೦ ರೂ ಬಾಡಿಗೆ ನಿಗದಿಪಡಿಸಿದ ಮಳಿಗೆಗಳು ೫೦ ರಿಂದ ೬೦ ಸಾವಿರ ರೂಗಳ ತನಕ ಖರೀದಿಯಾದವು. ವಿಶೇಷ ಚೇತನರಿಗೆ ನಿಗದಿಪಡಿಸಿದ ಮಳಿಗೆ ಮಾತ್ರ ನಿಯಮಾನುಸಾರ ಲಾಟರಿ ಮೂಲಕ ಕನಿಷ್ಠ ಬಾಡಿಗೆಗೆ ನೀಡಲಾಯಿತು. ೧೨ ಮಳಿಗೆಗಳಿಗೆ ಒಟ್ಟು ೪೮೦ ಮಂದಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ಅಂಗಡಿ ಮಳಿಗೆ ಒಂದಕ್ಕೆ ತಲಾ ೫೦ ಸಾವಿರ ಮುಂಗಡ ಹಣ ಪಾವತಿಸಿ ಒಟ್ಟು ನಾಲ್ಕು ಕೋಟಿಗೂ ಅಧಿಕ ಮುಂಗಡ ಹಣ ಸಂಗ್ರಹವಾಗಿತ್ತು. ಕೆಲವು ಬಿಡ್‌ದಾರರು ಎಲ್ಲಾ ೧೨ ಮಳಿಗೆಗಳಿಗೂ ಮುಂಗಡ ಹಣ ಪಾವತಿಸಿ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.

ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಟಿ.ಎಸ್. ಗಿರೀಶ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಹಿರಿಯ ಆರೋಗ್ಯ ಅಧಿಕಾರಿ ಉದಯಕುಮಾರ್, ಅಧಿಕಾರಿಗಳಾದ ಧನಂಜಯ್ ನಂಜುAಡ, ರಾಮು, ಯಶವಂತ್ ಟೆಂಡರ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಕುಶಾಲನಗರ ಪೊಲೀಸ್ ಇನ್ಸ್ಪೆಕ್ಟರ್ ಬಿ.ಆರ್. ಪ್ರದೀಪ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.