ಮಡಿಕೇರಿ, ಜ. ೨೮: ಸ್ವತಂತ್ರ ಭಾರತದ ರಕ್ಷಣಾ ಪಡೆಗಳ ಪ್ರಪ್ರಥಮ ಮಹಾದಂಡನಾಯಕ, ಫೀಲ್ಡ್ ಮಾರ್ಷಲ್ ಖ್ಯಾತಿಯ ಕೊಡಗಿನ ಸುಪುತ್ರ ಕೆ.ಎಂ. ಕಾರ್ಯಪ್ಪ ಅವರ ಸಂಸ್ಮರಣಾ ಕಾರ್ಯಕ್ರಮ ಇಂದು ಜಿಲ್ಲೆಯ ಹಲವೆಡೆ ಸೇರಿದಂತೆ ಬೆಂಗಳೂರು, ಮೈಸೂರು ಮತ್ತಿತರ ಕಡೆಗಳಲ್ಲಿಯೂ ಜರುಗಿತು.
ವಿಶ್ವ ಕಂಡ ಮಹಾನ್ ಸೇನಾನಿಯ ೧೨೭ನೇಯ ಜನ್ಮದಿನಾಚರಣೆಯ ಅಂಗವಾಗಿ ಕಾರ್ಯಪ್ಪ ಅವರ ಸ್ಮರಣೆಯೊಂದಿಗೆ ಗೌರವ ನಮನದೊಂದಿಗೆ ಹಲವು ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಫೀ.ಮಾ. ಕಾರ್ಯಪ್ಪ ಅವರ ಪ್ರತಿಮೆ ಆವರಣ, ರೋಷನಾರದಲ್ಲಿರುವ ಸಮಾಧಿ ಸ್ಥಳ, ಹುಟ್ಟೂರು ಶನಿವಾರಸಂತೆ, ಸೋಮವಾರಪೇಟೆ, ಗೋಣಿಕೊಪ್ಪಲು ಕಾವೇರಿ ಕಾಲೇಜು ಆವರಣದಲ್ಲಿರುವ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಜೋಡಿ ಪ್ರತಿಮೆ ಸ್ಥಳ, ಮೈಸೂರಿನಲ್ಲಿರುವ ಕಾರ್ಯಪ್ಪ ವೃತ್ತ (ಮೆಟ್ರೋಪೋಲ್)ದಲ್ಲಿನ ಪ್ರತಿಮೆ, ರಾಜಧಾನಿ ಬೆಂಗಳೂರಿನ ವಸಂತ ನಗರದಲ್ಲಿರುವ ಕೊಡವ ಸಮಾಜದ ಸನಿಹದ (ಕಂಟೋನ್ಮೆAಟ್) ಕಾರ್ಯಪ್ಪ ವೃತ್ತದಲ್ಲಿನ ಪ್ರತಿಮೆ ಸ್ಥಳ ಸೇರಿದಂತೆ ಹಲವೆಡೆಗಳಲ್ಲಿ ಸೇನಾ ಮಹಾದಂಡನಾಯಕನಿಗೆ ಪುಷ್ಪಾರ್ಚನೆಯೊಂದಿಗೆ ಗೌರವ ಸೂಚನೆಯ ಕಾರ್ಯಕ್ರಮಗಳು ಜರುಗಿದವು. ವಿಶೇಷವಾಗಿ ಬೆಂಗಳೂರು ಕೊಡವ ಸಮಾಜದಿಂದ ಈ ದಿನವನ್ನು ಕೊಡವ ಸಾಂಸ್ಕೃತಿಕ ದಿನವನ್ನಾಗಿಯೂ ಆಚರಿಸಲಾಯಿತು.
ಮಡಿಕೇರಿಯಲ್ಲಿ
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮಡಿಕೇರಿಯಲ್ಲಿ ನಡೆದ ಆಚರಣೆಯಲ್ಲಿ ಶಿಸ್ತಿನ ಸಿಪಾಯಿಗೆ ಗೌರವದ ನಮನ ಸಲ್ಲಿಸಲಾಯಿತು.
ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿಯಿಂದ ಫೀ.ಮಾ. ಕಾರ್ಯಪ್ಪ ಅವರ ಭಾವಚಿತ್ರವನ್ನು ಒಳಗೊಂಡ ವಾಹನದೊಂದಿಗೆ ವಿವಿಧ ಶಾಲೆಗಳ ಸ್ಕೌಟ್ಸ್ಗೈಡ್ಸ್, ಎನ್ಸಿಸಿ ವಿದ್ಯಾರ್ಥಿಗಳು, ಕೊಡವ ಸಮಾಜಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಪ್ರಮುಖರು, ಕಾರ್ಯಕರ್ತರನ್ನು, ಮಾಜಿ ಸೈನಿಕರನ್ನು ಒಳಗೊಂಡು ಆಕರ್ಷಕ ಪಥ ಸಂಚಲನ ಫೀ.ಮಾ. ಕಾರ್ಯಪ್ಪ ಪ್ರತಿಮೆ ಸ್ಥಳದವರೆಗೆ ನಡೆಯಿತು. ಮಾಜಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಸಹಶೀಲ್ದಾರ್ ಶ್ರೀಧರ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಗಣ್ಯರು ಫೀ.ಮಾ. ಕಾರ್ಯಪ್ಪ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪಥ ಸಂಚಲನಕ್ಕೆ ಚಾಲನೆ ನೀಡಿದರು.
ಪಥಸಂಚಲನದ ಬಳಿಕ ಫೀ.ಮಾ. ಕಾರ್ಯಪ್ಪ ಪ್ರತಿಮೆ ಎದುರು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಗೌರವ ಸಲ್ಲಿಸಲಾಯಿತು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಪುತ್ರ ನಿವೃತ್ತ ಏರ್ಮಾರ್ಷಲ್ ನಂದಾ ಕಾರ್ಯಪ್ಪ ಅವರು ಮೊದಲಿಗೆ ಕಾರ್ಯಪ್ಪ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಜಿಲ್ಲಾಡಳಿತದ ಪರವಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಪೊಲೀಸ್ ಇಲಾಖೆ ಪರವಾಗಿ ಎಸ್ಪಿ ಆರ್.ಎನ್. ಬಿಂದುಮಣಿ ಪುಷ್ಪ ನಮನ ಸಲ್ಲಿಸಿದರು.
ಬಳಿಕ ಮಾಜಿ ಸಚಿವ ಯಂ.ಸಿ. ನಾಣಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಕುಮಾರ್, ಸ್ಕೌರ್ಟ್ಸ್ ಗೈಡ್ಸ್ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ, ನಗರಸಭಾಧ್ಯಕ್ಷೆ ಕಲಾವತಿ, ಪದ್ಮಶ್ರೀ ರಾಣಿ ಮಾಚಯ್ಯ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ, ಯುಕೋ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ರಾಜಕೀಯ ಪಕ್ಷಗಳ ಪ್ರಮುಖರು, ಮಾಜಿ ಸೈನಿಕರು, ಶಾಲಾ ವಿದ್ಯಾರ್ಥಿಗಳು, ಸೈನಿಕ ಶಾಲೆ ವಿದ್ಯಾರ್ಥಿಗಳು, ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಕಾರ್ಯಪ್ಪ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
“ಯುವ ಪೀಳಿಗೆಗೆ ಆದರ್ಶ''
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಯಂ.ಸಿ. ನಾಣಯ್ಯ, ಫೀ.ಮಾ. ಕಾರ್ಯಪ್ಪ ಅವರ ಬದುಕು ಯುವ ಪೀಳಿಗೆಗೆ ಆದರ್ಶವಾಗಬೇಕು. ಸೇನಾಧಿಕಾರಿಗಳ ಪ್ರತಿಮೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಹಾಗೂ ಸಂರಕ್ಷಣೆ ಮಾಡುವತ್ತ ಜಿಲ್ಲಾಡಳಿತ ಗಮನ ಹರಿಸಬೇಕೆಂದರು.
“ಆದರ್ಶ ಮೈಗೂಡಿಸಿಕೊಳ್ಳಬೇಕು''
ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಮಾತನಾಡಿ, ಫೀ.ಮಾ. ಕಾರ್ಯಪ್ಪ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಹಾಗಾದಾಗ ಉತ್ತಮ ಸಮಾಜ ಹಾಗೂ ದೇಶ ನಿರ್ಮಾಣವಾಗುತ್ತದೆ ಎಂದರು.
“ಶಿಸ್ತು ಸ್ಫೂರ್ತಿಯಾಗಲಿ''
ಶಿಸ್ತಿನ ಸಿಪಾಯಿ ಆಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಬದುಕಿನ ಶಿಸ್ತು ಪ್ರತಿಯೊಬ್ಬ ಭಾರತೀಯನಿಗೆ ಸ್ಫೂರ್ತಿಯಾಗಬೇಕು ಎಂದು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ ಹೇಳಿದರು.
ರಾಜ್ಯ ಮಾನವ ಹಕ್ಕು - ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಅಧ್ಯಕ್ಷ ಅವರೆಮಾದಂಡ ಶರಣ್ ಪೂಣಚ್ಚ ಮಾತನಾಡಿ, ಕಾರ್ಯಪ್ಪ ಅವರು ಈ ದೇಶದ ಹೆಮ್ಮೆಯಾಗಿದ್ದು, ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಮುನ್ನಡೆಯೋಣ ಎಂದರು.
ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಧ್ವನಿ ಸಂದೇಶದ ಮೂಲಕ ಕಾರ್ಯಪ್ಪ ಅವರ ಶಿಸ್ತಿನ ಜೀವನವನ್ನು ಎಲ್ಲರೂ ಪಾಲಿಸಬೇಕೆಂದರು. ಮಡಿಕೇರಿ ಶಾಸಕ ಡಾ. ಮಂತರ್ಗೌಡ, ಎಂಎಲ್ಸಿ ಸುಜಾ ಕುಶಾಲಪ್ಪ ಅವರುಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿರುವ ಕುರಿತು ಮಾಹಿತಿ ನೀಡಲಾಯಿತು.
ಕೊಡವ ಮಕ್ಕಡ ಕೂಟ, ಕೊಡವಾಮೆರ ಕೊಂಡಾಟ, ಫೀ.ಮಾ. ಕಾರ್ಯಪ್ಪ - ಜನರಲ್ ತಿಮ್ಮಯ್ಯ ಫೌಂಡೇಶನ್, ಸ್ಕೌಟ್ಸ್ಗೈಡ್ಸ್, ಸರ್ವೋದಯ ಸಮಿತಿ, ಲಯನ್ಸ್ ಕ್ಲಬ್, ಗ್ರೀನ್ ಸಿಟಿ ಫೋರಂ, ಕೊಡಗು ಏಕೀಕರಣ ರಂಗ, ಫೀ.ಮಾ. ಕಾರ್ಯಪ್ಪ ಅಭಿಮಾನಿಗಳ ಬಳಗ, ಕೊಡಗು ಅಭಿವೃದ್ಧಿ ಸಮಿತಿ, ಸೇವಾದಳ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜನರಲ್ ತಿಮ್ಮಯ್ಯ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಗೂ ದೇಶಭಕ್ತಿ ಗೀತೆ ಹಾಡಿದರು. ಸಂತ ಮೈಕಲರ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಉಪನ್ಯಾಸಕಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಕಾರ್ಯಪ್ಪ ಅವರ ಬದುಕು ಹಾಗೂ ಸಾಧನೆ ಕುರಿತು ವಿಚಾರ ಮಂಡಿಸಿದರು. ಚೋಕಿರ ಅನಿತಾ ದೇವಯ್ಯ ಕಾರ್ಯಕ್ರಮ ನಿರೂಪಿಸಿದರು. ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ನೆರೆದಿದ್ದ ಎಲ್ಲರಿಗೂ ಸಿಹಿ ಹಂಚಲಾಯಿತು.