ಸೋಮವಾರಪೇಟೆ, ಜ. ೨೮: ತಾಲೂಕಿನ ಆಲೂರು-ಸಿದ್ದಾಪುರ ಸಮೀಪದ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ಶ್ರೀ ತಪೋವನೇಶ್ವರಿ ದೇವಿಯ ೧೯ನೆ ವರ್ಷದ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ರಥಸಪ್ತಮಿಯಂದು ಬೆಂಗಳೂರಿನ ರಾಜೇಶ್ವರಿ ಅಮ್ಮನವರ ನೇತೃತ್ವದಲ್ಲಿ ಬೆಳಗ್ಗಿನಿಂದಲೇ ತಪೋಕ್ಷೇತ್ರದಲ್ಲಿರುವ ತಪೋವನೇಶ್ವರಿ ದೇವಿಗೆ ಅಭಿಷೇಕ, ಅರ್ಚನೆ ಸೇರಿದಂತೆ ವಿಶೇಷ ಪೂಜೆ ನಡೆಯಿತು. ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು.
ಮಕ್ಕಳಿಗೆ ಸಿಹಿ ತಿನ್ನಿಸಿ, ವಿವಿಧ ಆಟದ ಸಾಮಗ್ರಿಗಳನ್ನು ನೀಡುವ ಮೂಲಕ ಮಕ್ಕಳ ಸಂಭ್ರಮವನ್ನು ಹೆಚ್ಚುಗೊಳಿಸಿದ್ದರೆ, ಮಹಿಳೆಯರಿಗೆ ಮಡಿಲು ಅಕ್ಕಿ ನೀಡಿ ಆಶೀರ್ವದಿಸಲಾಯಿತು.
ಈ ಸಂದರ್ಭ ಕ್ಷೇತ್ರದ ಮಠಾಧೀಶರಾದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಕಳೆದ ೧೯ ವರ್ಷಗಳಿಂದ ರಾಜೇಶ್ವರಿ ಅಮ್ಮನವರ ನೇತೃತ್ವದಲ್ಲಿ ರಥ ಸಪ್ತಮಿಯಂದು ವರ್ಧಂತಿ ನಡೆಸಲಾಗುತ್ತಿದೆ. ಪೂಜಾ ಕಾರ್ಯದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ತಪೋಕ್ಷೇತ್ರದಲ್ಲಿ ವೀರಭದ್ರಸ್ವಾಮಿ ಹಾಗೂ ವೃಷಭಲಿಂಗೇಶ್ವರ ಸ್ವಾಮಿಯೊಂದಿಗೆ, ತಪೋವನೇಶ್ವರಿ ದೇವಿಯೂ ನೆಲೆಯಾಗಿದ್ದು, ಧಾರ್ಮಿಕ ಕಾರ್ಯಗಳಿಂದ ಸಮಾಜ ಸುಭೀಕ್ಷಗೊಳ್ಳುತ್ತದೆ ಎಂದರು.
ಕ್ಷೇತ್ರದ ಅರ್ಚಕರಾದ ಚಿಕ್ಕವೀರೇಶ ಅವರ ಪುರೋಹಿತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿದವು. ಮಧ್ಯಾಹ್ನ ಮಹಾ ದಾಸೋಹ ನಡೆಯಿತು.