ಕುಶಾಲನಗರ, ಜ. ೨೯: ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸಿ ಅವರಲ್ಲಿನ ಕಲೆಯನ್ನು ಪ್ರೋತ್ಸಾಹಿಸುವ ಮೂಲಕ ಕಲಾವಿದರ ಬೆನ್ನು ತಟ್ಟುವ ಕೆಲಸ ಮಾಡಬೇಕಿದೆ ಎಂದು ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್‌ನ ಕೊಡಗು ಜಿಲ್ಲಾಧ್ಯಕ್ಷೆ ಡಾ.ನಯನ ಹರಿಶ್ಚಂದ್ರ ಕರೆ ನೀಡಿದರು. ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಗುಮ್ಮನಕೊಲ್ಲಿಯ ವಾಲ್ಮೀಕಿ ಭವನದಲ್ಲಿ ನಡೆದ ಸ್ವರ ಸಂಭ್ರಮ ಕರೋಕೆ ಗಾಯನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವರ ಸಂಭ್ರಮ ಸ್ಪರ್ಧಾ ಕಾರ್ಯಕ್ರಮವಲ್ಲ. ಬದಲಿಗೆ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ವೇದಿಕೆಯಾಗಿದೆ.

ಸಂಗೀತ ನಮ್ಮ ಜೀವನದ ಅವಿಭಾಜ್ಯ ಅಂಗ. ಸುಮಧುರ ಗೀತೆಗಳು ಮನಸ್ಸಿನ ದಣಿವಾರಿಸುತ್ತದೆ. ಈ ನಿಟ್ಟಿನಲ್ಲಿ ಗಾಯನ ಕಲಾವಿದರನ್ನು ಪ್ರೋತ್ಸಾಹಿಸಲು, ಕಲೆಯನ್ನು ಪರಿಚಯಿಸಲು ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕ ಎಂದರು. ಕೊಡಗು, ಮೈಸೂರು, ಹಾಸನ ಜಿಲ್ಲೆಗಳ ವಿವಿಧೆಡೆಗಳಿಂದ ಆಗಮಿಸಿದ್ದ ೩೦ ಕ್ಕೂ ಅಧಿಕ ಗಾಯಕರು ಸುಮಧುರ ಗೀತೆಗಳ ಮೂಲಕ ಮನರಂಜಿಸಿದರು. ಪಾಲ್ಗೊಂಡ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಿನಿಮಾ ಕಲಾವಿದರು ಸೇರಿದಂತೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಪ್ರದರ್ಶನ ನಡೆಯಿತು. ಕಾನೂನು ಸಲಹೆಗಾರ ಚಂದ್ರಶೇಖರ್ ಕೆ.ಎಸ್, ನಿವೃತ್ತ ಭೂಮಾಪಕ ಅಧಿಕಾರಿ ಹರೀಶ್ ಚಂದ್ರ ಬಿದ್ರುಪಣೆ, ಉದ್ಯಮಿಗಳಾದ ಬಿ.ಜಿ.ರಾಜೇಶ್, ರಾಬಿನ್ ಪೀಟರ್, ಕಾಫಿ ಪ್ಲಾಂಟರ್ ಪೋತಂಡ್ರ ತೇಜಪ್ರಸಾದ್, ಅಭಿಯಂತರ ಯೂಸಫ್ ಟಿ.ಎ. ಅವರು ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಶುಭ ಕೋರಿದರು. ಈ ಸಂದರ್ಭ ಪರಿಷತ್ತಿನ ಕೊಡಗು ಜಿಲ್ಲಾ ಕಾರ್ಯದರ್ಶಿ ಹರಿಣಿ ಪ್ರಭಾಕರ್, ಸಂಸ್ಥಾಪಕ ಡಾ.ಕಸ್ತೂರಿ ಚಂದ್ರು, ಮಹಿಳಾ ನಗರಾಧ್ಯಕ್ಷೆ ಅಮಿನಾ ಬೇಗಂ, ಹಾಸನ ಜಿಲ್ಲಾಧ್ಯಕ್ಷೆ ಪಾರ್ವತಿ, ಮೈಸೂರು ಜಿಲ್ಲಾ ಕಾರ್ಯದರ್ಶಿ ರೂಪಾ ಮತ್ತಿತರರು ಇದ್ದರು.