ಮಡಿಕೇರಿ, ಜ. ೩೦: ಪೊಲೀಸ್ ಇಲಾಖೆ ಹಾಗೂ ರಕ್ಷಣಾ ಪಡೆಗಳ ಕರ್ತವ್ಯ ನಿರ್ವಹಣೆ ಒಂದಕ್ಕೊAದು ಪೂರಕವೇ ಆಗಿರುತ್ತದೆ; ಜಿಲ್ಲೆಯ ಮಾಜಿ ಯೋಧರು ಪೊಲೀಸರ ಕೆಲಸಕ್ಕೆ ಸಹಕರಿಸಬೇಕೆಂದು ಎಸ್‌ಪಿ ಬಿಂದುಮಣಿ ಅವರು ಮಾಜಿ ಸೈನಿಕರಲ್ಲಿ ಮನವಿ ಮಾಡಿದರು.

ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ನೂತನವಾಗಿ ಜಿಲ್ಲೆಗೆ ಆಗಮಿಸಿರುವ ಎಸ್‌ಪಿ ಬಿಂದುಮಣಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಎಸ್‌ಪಿ ಅವರು ಮಾಜಿ ಸೈನಿಕರಿಂದ ಇಲಾಖೆ ಅಗತ್ಯ ಸಹಕಾರವನ್ನು ಬಯಸುತ್ತದೆ. ಅಲ್ಲದೆ ಮಾಜಿ ಯೋಧರು, ಅವರ ಅವಲಂಬಿತರ ಸಮಸ್ಯೆಗಳಿದ್ದಲ್ಲಿ ಅದಕ್ಕೆ ಸ್ಪಂದಿಸುವುದಾಗಿ ಭರವಸೆಯಿತ್ತರು. ಮುಂದಿನ ದಿನದಲ್ಲಿ ಮಾಜಿ ಸೈನಿಕರನ್ನು ಒಳಗೊಂಡ ಪ್ರತ್ಯೇಕ ಸಭೆಯೊಂದನ್ನು ಆಯೋಜಿಸಿ ಸಮಸ್ಯೆಗಳ ಬಗ್ಗೆ ಚರ್ಚಿಸುವುದಾಗಿಯೂ ಅವರು ಈ ಸಂದರ್ಭ ಆಶ್ವಾಸನೆಯಿತ್ತರು. ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ನಿವೃತ್ತ ಮೇಜರ್ ಜನರಲ್ ಬಾಚಮಂಡ ಎ. ಕಾರ್ಯಪ್ಪ, ಕಾರ್ಯದರ್ಶಿ ಮೇಜರ್ ಓ.ಎಸ್. ಚಿಂಗಪ್ಪ, ಉಪಾಧ್ಯಕ್ಷರಾದ ಏರ್ ಕಮಾಂಡರ್ ದೇವಯ್ಯ, ಪದಾಧಿಕಾರಿಗಳಾದ ಲೆ.ಕ. ಎ.ಎ. ಗಣಪತಿ, ಕೆ.ಎ. ನಾಚಪ್ಪ, ಮುಲ್ಲೆರ ಕಾವೇರಪ್ಪ, ಐನಂಡ ಮಂದಣ್ಣ, ಈರಪ್ಪ, ವಾಸಪ್ಪ, ನಂಜುAಡ, ಕುಟ್ಟಂಡ ಮಾದಪ್ಪ ಸೇರಿದಂತೆ ಜಿಲ್ಲೆಯ ವಿವಿಧ ೯ ಸಂಘಗಳ ಪ್ರಮುಖರು ಈ ಸಂದರ್ಭ ಪಾಲ್ಗೊಂಡಿದ್ದರು.