ಸಿದ್ದಾಪುರ, ಜ. ೩೦: ಗುರುವಾರದಂದು ಹಾಡಹಗಲೇ ಕಾರ್ಮಿಕನ ಮೇಲೆ ಒಂಟಿ ಸಲಗ ದಾಳಿ ನಡೆಸಿದ್ದ ಹಿನ್ನೆಲೆ ಅರಣ್ಯ ಇಲಾಖೆ ಇಂದು ಕಾರ್ಯಾಚರಣೆ ಕೈಗೊಂಡಿತು.

ವೀರಾಜಪೇಟೆ ವಲಯ ಮತ್ತು ತಿತಿಮತಿ ವಲಯ ಅರಣ್ಯ ಇಲಾಖೆ ವ್ಯಾಪ್ತಿಯ ಗ್ರಾಮಗಳ ಕಾಫಿ ತೋಟಗಳಲ್ಲಿ ಕಾರ್ಯಾಚರಣೆ ನಡೆಯಿತು. ಗುರುವಾರದಂದು ಮಧ್ಯಾಹ್ನ ಸಿದ್ದಾಪುರ ಸಮೀಪದ ಗೌರಿಬೆಟ್ಟ ಕಾಫಿ ತೋಟದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಅಬ್ದುಲ್ ಲತೀಫ್ ಎಂಬವರ ಮೇಲೆ ಒಂಟಿ ಸಲಗ ದಾಳಿ ಮಾಡಿ ಕೊಂದು ಹಾಕಿತ್ತು. ಈ ಹಿನ್ನೆಲೆ ಅರಣ್ಯ ಇಲಾಖೆ ತಂಡ ಬಾಡಗ ಬಾಣಂಗಾಲ ಗ್ರಾಮದ ವ್ಯಾಪ್ತಿಯ ಹಾಗೂ ಪುಲಿಯೇರಿ ಗ್ರಾಮದ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಒಂಟಿ ಸಲಗ ಒಂದನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಯಿತು. ಒಂಟಿ ಸಲಗದ ಚಲನವಲನವನ್ನು ಕಂಡುಹಿಡಿದು ಅದನ್ನು ಸೆರೆ ಹಿಡಿಯಲು ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಕಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.