ಪೊನ್ನಂಪೇಟೆ, ಜ. ೩೦: ಕಿರುಗೂರು ಗ್ರಾಮದ ಆಲೆಮಾಡ ಸುಧೀರ್ ಎಂಬವರ ತೋಟದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಫಸಲು ಭರಿತ ಕಾಫಿಗಿಡಗಳಿಂದ ಕಳ್ಳರು ಕಾಫಿ ಹಣ್ಣುಗಳನ್ನು ಕುಯ್ದು ಕಳವು ಮಾಡಿರುವ ಘಟನೆ ನಡೆದಿದೆ. ಜೊತೆಗೆ ೧೦ ಮರಗಳಲ್ಲಿ ಹಬ್ಬಿದ್ದ ಕರಿಮೆಣಸು ಬಳ್ಳಿಗಳಿಂದ ಕರಿ ಮೆಣಸು ಕುಯ್ದು ಕಳವು ಮಾಡಲಾಗಿದೆ.

ಬೆಳಿಗ್ಗೆ ತೋಟದ ಮಾಲೀಕರು ತೋಟಕ್ಕೆ ತೆರಳಿದ್ದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ಕಾಫಿ ಗಿಡದ ಕೆಳಗೆ ತಾಟು ಹಾಸಿ ಗಿಡದಲ್ಲಿ ಹಾಗೂ ನೆಲದಲ್ಲಿ ಒಂದೂ ಕಾಫಿ ಬೀಳದಂತೆ ಕಳ್ಳರು ಕಾಫಿ ಕುಯ್ದು ಕಳವು ಮಾಡಿದ್ದಾರೆ.

ತಮ್ಮ ತೋಟದಲ್ಲಿ ಕಾಫಿ ಗಿಡಗಳಿಂದ ಕಾಫಿ ಹಣ್ಣು ಹಾಗೂ ಕರಿಮೆಣಸು ಬಳ್ಳಿಗಳಿಂದ ಕರಿ ಮೆಣಸು ಕಳವು ಮಾಡಿರುವ ಬಗ್ಗೆ ತೋಟದ ಮಾಲೀಕ ಆಲೆಮಾಡ ಸುಧೀರ್ ಅವರು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ತೋಟದ ಮಾಲೀಕ ಆಲೆಮಾಡ ಸುಧೀರ್ ಅಮಾತನಾಡಿ, ಕಳೆದ ಎಂಟು ದಿನದ ಹಿಂದೆ ಕಾಫಿ ಕೊಯ್ಲು ಮಾಡಿ ಬಿಡುವು ನೀಡಿದ್ದೆವು. ಇದೀಗ ಕಾಫಿ ಕೊಯ್ಲು ಮಾಡಲು ತೋಟಕ್ಕೆ ಬಂದಾಗ ಸುಮಾರು ಒಂದೂವರೆ ಲಕ್ಷ ಮೌಲ್ಯದ ಕಾಫಿ ಹಾಗೂ ಕರಿಮೆಣಸು ಕಳವು ಮಾಡಿರುವುದು ಗಮನಕ್ಕೆ ಬಂದಿದೆ ಎಂದರು.