ಮುಳ್ಳೂರು, ಜ. ೩೦: ನಿಡ್ತ ಗ್ರಾ.ಪಂ.ವ್ಯಾಪ್ತಿಯ ವಿವಿಧ ಶಾಲೆಗಳ ಮಕ್ಕಳ ಗ್ರಾಮಸಭೆ ಗೋಪಾಲಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ನಿಡ್ತ ಗ್ರಾ.ಪಂ. ಮತ್ತು ‘ನಾವು’ ಪ್ರತಿಷ್ಠಾನ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಅಶೋಕ್ ಮತ್ತು ಗೋಪಾಲಪುರ ಶಾಲಾ ವಿದ್ಯಾರ್ಥಿನಿ ಸ್ನೇಹ ಜಂಟಿ ಅಧ್ಯಕ್ಷತೆ ವಹಿಸಿದ್ದರು.

ಗೋಪಾಲಪುರ ಶಾಲೆಯ ವಿದ್ಯಾರ್ಥಿನಿ ಅಶ್ವಿನಿ ನಮ್ಮ ಶಾಲಾ ಮುಂಭಾಗದಲ್ಲಿರುವ ಮುಖ್ಯರಸ್ತೆಯಲ್ಲಿ ವಾಹನಗಳು ಅತೀ ವೇಗವಾಗಿ ಸಂಚರಿಸುವುದರಿAದ ಶಾಲೆಗೆ ಬರುವಾಗ ಮತ್ತು ಶಾಲೆ ಬಿಡುವ ಸಂದರ್ಭದಲ್ಲಿ ರಸ್ತೆ ದಾಟುವಾಗ ನಮಗೆ ಭಯವಾಗುತ್ತದೆ, ಶಾಲೆ ರಸ್ತೆ ಬದಿಯಲ್ಲಿರುವುದರಿಂದ ರಸ್ತೆಯಲ್ಲಿ ವಾಹನಗಳ ವೇಗ ನಿಯಂತ್ರಣಗೊಳಿಸಲು ಕ್ರಮಕೈಗೊಳ್ಳಿರಿ ಎಂದು ಮನವಿ ಮಾಡಿದಳು.

ವಿದ್ಯಾರ್ಥಿನಿ ಪ್ರತೀಕ್ಷ ಮಾತ ನಾಡಿ, ರಾತ್ರಿ ವೇಳೆ ಯಲ್ಲಿ ನಮ್ಮ ಶಾಲಾ ಆವರಣ ದಲ್ಲಿ ಪುಂಡ ಪೋಕರಿಗಳು ಸಿಗರೇಟ್ ಪ್ಯಾಕ್, ಮದ್ಯದ ಬಾಟಲ್, ನೀರಿನ ಬಾಟಲ್ ಮುಂತಾದ ತ್ಯಾಜ್ಯಗಳನ್ನು ಬಿಸಾಕಿ ಹೋಗುತ್ತಾರೆ. ನಾವು ಬೆಳಗ್ಗೆ ಶಾಲೆಗೆ ಬರುವಾಗ ಅವುಗಳನ್ನು ಸ್ವಚ್ಛಗೊಳಿಸುವುದೆ ನಮ್ಮ ಕೆಲಸವಾಗಿದೆ. ಈ ಕುರಿತು ಕ್ರಮಕೈಗೊಳ್ಳಿರಿ ಎಂದು ಬೇಸರ ವ್ಯಕ್ತ ಪಡಿಸಿದರು.

ಹಿತ್ತಲಕೇರಿ ಶಾಲಾ ವಿದ್ಯಾರ್ಥಿಯೊಬ್ಬರು ಮಾತನಾಡಿ, ನಮ್ಮ ಶಾಲೆಗೆ ತಡೆಗೋಡೆ ಇರುವುದಿಲ್ಲ. ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ಮುಳ್ಳೂರು ಶಾಲೆಯ ವಿದ್ಯಾರ್ಥಿ ಯುಗನ್ ನಮ್ಮ ಶಾಲೆಯಲ್ಲಿ ನಿರ್ಮಿಸಿರುವ ಶೌಚಾಲಯ ಬ್ಲಾಕ್ ಗೊಂಡಿದ್ದು ಶೌಚಕ್ಕೆ ಸಮಸ್ಯೆಯಾಗಿದೆ ಎಂದು ಹೇಳಿದನು.

ಹಾರೆಹೊಸೂರು ಶಾಲಾ ವಿದ್ಯಾರ್ಥಿಗಳು ರಾತ್ರಿ ವೇಳೆಯಲ್ಲಿ ಕೆಲವರು ನಮ್ಮ ಶಾಲೆಯ ತಡೆಗೋಡೆ ಹಾರಿಬಂದು ಶಾಲಾ ಆವರಣಕ್ಕೆ ಮದ್ಯದ ಬಾಟಲಿ ಮತ್ತು ತ್ಯಾಜ್ಯಗಳನ್ನು ಬಿಸಾಡುತ್ತಾರೆ ಮತ್ತು ಶಾಲೆಗೆ ರಜೆ ಇರುವ ಸಂದರ್ಭದಲ್ಲಿ ಯಾರೋ ಶಾಲಾ ಗೇಟ್ ತೆಗೆದು ದನಕರುಗಳನ್ನು ಬಿಡುತ್ತಾರೆ. ಇವು ಶಾಲಾ ಆವರಣದಲ್ಲಿ ನೆಟ್ಟಿರುವ ತರಕಾರಿ ಗಿಡ, ಹೂವಿನ ಗಿಡಗಳನ್ನು ತಿಂದು ಹಾಳು ಮಾಡುತ್ತವೆ, ಆದ್ದರಿಂದ ನಮ್ಮ ಶಾಲೆಗೆ ಸಿಸಿ ಕ್ಯಾಮರ ಅಳವಡಿಸುವಂತೆ ಮನವಿ ಮಾಡಿದರು.

ಮಕ್ಕಳ ಗ್ರಾಮಸಭೆಯಲ್ಲಿ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಮಕ್ಕಳ ಹಕ್ಕು ಕುರಿತಾದ ಕಿರು ನಾಟಕ ಪ್ರದರ್ಶಿಸುವ ಮೂಲಕ ಗಮನ ಸೆಳೆದರು.

ಮಕ್ಕಳ ಗ್ರಾಮಸಭೆಯಲ್ಲಿ ಸದರಿ ಗ್ರಾ.ಪಂ.ವತಿಯಿAದ ಶಾಲಾ ಮಕ್ಕಳಿಗೆ ಆಟಿಕೆ ಮತ್ತು ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಗ್ರಾಮಸಭೆಯಲ್ಲಿ ವಿವಿಧ ಇಲಾಖೆ ಅಧಿಕಾ ರಿಗಳು ಮಾಹಿತಿ ನೀಡಿದರು. ಗ್ರಾ.ಪಂ.ಅಧ್ಯಕ್ಷ ಅಶೋಕ್, ‘ನಾವು’ ಪ್ರತಿಷ್ಠಾನ ಸಂಸ್ಥೆಯ ಪ್ರೀತಿ ಮತ್ತು ವಿದ್ಯಾರ್ಥಿನಿ ಸ್ನೇಹ ಮಾತನಾಡಿದರು. ಸಭೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸಾವಿತ್ರಿ ಗ್ರಾ.ಪಂ.ಸದಸ್ಯರಾದ ತಸ್ಲಿಮ್, ಕಾರ್ತಿಕ್, ತೀರ್ಥನಂದ್, ಪಿಡಿಓ ಮಾನಸ ಮುಂತಾದವರು ಹಾಜರಿದ್ದರು.