ಕುಶಾಲನಗರ, ಜ. ೩೧: ಪ್ರತಿಯೊಬ್ಬರೂ ಶ್ರದ್ಧೆ ಹಾಗೂ ಭಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಆಂತರಿಕ ಬದಲಾವಣೆಯನ್ನು ಕಾಣಬೇಕಾಗಿದೆ ಎಂದು ವಾಸವಿ ಪೀಠದ ಆರ್ಯವೈಶ್ಯ ಪೀಠಾಧಿಪತಿ ಶ್ರೀ ಸತ್ಯಾನಂದ ಸರಸ್ವತಿ ಸ್ವಾಮೀಜಿ ಕರೆ ನೀಡಿದರು.

ಕುಶಾಲನಗರದ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಪ್ರತಿನಿತ್ಯ ಆರಾಧನೆ ಮೂಲಕ ಭಕ್ತಿ ಬೆಳವಣಿಗೆ ಸಾಧನೆ ಸಾಧ್ಯ. ಮನಸ್ಸಿನ ಒಂದು ಭಾಗ ಸದಾ ಭಗವಂತನ ಮೇಲಿರಬೇಕು ಆ ಮೂಲಕ ನೆಮ್ಮದಿ ಆನಂದ ಲಭಿಸಲು ಸಾಧ್ಯ ಎಂದರು.

ಸರ್ವಸ್ವ ನೀಡಿದ ಭಗವಂತನಿಗೆ ನಾವು ಪರಿಪೂರ್ಣ ಭಕ್ತಿ, ಪೂಜೆ ಮೂಲಕ ಆಂತರಿಕ ಬೆಳವಣಿಗೆ ಕಾಣಬಹುದಾಗಿದೆ. ಭಕ್ತಿ ಭಾವನೆಗಳು ನಿರಂತರವಾಗಿ ಹೆಚ್ಚಿಸಿಕೊಳ್ಳುವ ಕೆಲಸ ವಾಗಬೇಕಾಗಿದೆ ಎಂದರು.

ಕುಶಾಲನಗರದಲ್ಲಿ ಪುಟ್ಟ ಸಮುದಾಯ ವಾಗಿರುವ ಆರ್ಯವೈಶ್ಯ ಮಂಡಳಿಯ ಹಾಗೂ ವಾಸವಿ ಯುವಜನ ಸಂಘದ ಕಾರ್ಯವೈಖರಿ, ಚಟುವಟಿಕೆಗಳ ಬಗ್ಗೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಸಣ್ಣ ಸಮಾಜವನ್ನು ಗಟ್ಟಿಯಾಗಿ ಉಳಿಸುವುದು ಎಲ್ಲರ ಬಾಧ್ಯತೆ ಹಾಗೂ ಜವಾಬ್ದಾರಿಯಾಗಿದೆ ಎಂದು ಹೇಳಿದರು.