ಸುಂಟಿಕೊಪ್ಪ, ಜ. ೩೧: ಸಮಾಜಕ್ಕೆ ಪೂರಕವಾಗಿ ಬಾಳಬೇಕೆ ಹೊರತು ಮಾರಕವಾಗಿ ಬಾಳಬಾರದು ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಕಿವಿಮಾತು ಹೇಳಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭವು ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಸಂದರ್ಭ ಅವರು ಮಾತನಾಡಿದರು. ಮದ್ಯಪಾನದ ಸಾಧಕ ಭಾದಕಗಳನ್ನು ಆರಿತ ಜನ ಮದ್ಯಪಾನ ವರ್ಜನ ಶಿಬಿರಗಳ ಯಶಸ್ವಿಗೆ ಕೊಡಗಿನಲ್ಲಿಯೂ ಅತ್ಯಂತ ಯಶಸ್ವಿಯಾಗಿ ಕೈಜೋಡಿಸಿದ್ದಾರೆ ಎಂದರು. ಕುಡಿತಕ್ಕೆ ಖರ್ಚು ಮಾಡುವ ಹಣವನ್ನು ಸಂಸಾರ ಮತ್ತು ಆರೋಗ್ಯ ಕಾಪಾಡಿಕೊಳ್ಳುವ ಬಜೆಟ್ ಆಗಿ ಮಾರ್ಪಡಿಸಿಕೊಳ್ಳಿ ಎಂದು ಕರೆ ನೀಡಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮಡಿಕೇರಿ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕೊಡಗು ಜಿಲ್ಲೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ ರಾಯಿಲ ಉಜಿರೆ ಕರ್ನಾಟಕ ರಾಜ್ಯ ಮದ್ಯ ಪಾನ ಸಂಯಮ ಮಂಡಳಿ ಬೆಂಗಳೂರು ಮತ್ತು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಸುಂಟಿಕೊಪ್ಪ ವಲಯದ ಎಲ್ಲಾ ಅಂಗ ಸಂಸ್ಥೆಗಳು ಆರಕ್ಷಕ ಠಾಣೆ ಪ್ರಾಥಮಿಕ ಆರೋಗ್ಯ ಕೆಂದ್ರ ನವಜೀವನ ಸಮಿತಿ ಶೌರ್ಯ ವಿಪತ್ತು ನಿರ್ವಹಣ ಘಟಕ ಮಡಿಕೇರಿ ತಾಲೂಕು ಹಾಗೂ ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ೨೦೪೦ ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ೨೦೪೦ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎ.ಲೋಕೇಶ್‌ಕುಮಾರ್ ಮಾತನಾಡಿ ಸಮಾಜಮುಖಿ ಕಾರ್ಯಕ್ಕೆ ಕೈ ಜೋಡಿಸಬೇಕೆಂದು ಕರೆ ನೀಡಿದರು. ಮತ್ತೋರ್ವ ಮುಖ್ಯ ಅತಿಥಿ ಕಾಫಿ ಬೆಳೆಗಾರರಾದ ಟಿ.ಕೆ.ಸಾಯಿಕುಮಾರ್ ಮಾತನಾಡಿ ಮದ್ಯಪಾನವು ಸಾಮಾಜಿಕ ಪಿಡುಗಾಗಿದ್ದು ಯುವಶಕ್ತಿಯನ್ನು ಹಾಳು ಮಾಡುತ್ತಿದೆ ಎಂದರು. ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಬಿ.ಭಾರತೀಶ್ ಹದಿಹರೆಯದ ಮಕ್ಕಳ ಚಲನವಲನ ಮತ್ತು ಸಹವಾಸದ ಬಗ್ಗೆ ಪೋಷಕರು ಅತ್ಯಂತ ಎಚ್ಚರಿಕೆ ವಹಿಸಬೇಕೆಂದರು.

ಮುಖ್ಯ ಅತಿಥಿಗಳಾಗಿ ಸುಂಟಿಕೊಪ್ಪ ಹೋಬಳಿ ಉಪತಹಶೀಲ್ದಾರ್ ಕೆ.ಎಂ. ದೀಪಿಕಾ ಬೆಳ್ತಂಗಡಿ, ಸೋಮವಾರಪೇಟೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಕುಮಾರ್, ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಉಪಾಧ್ಯಕ್ಷ ಬಿ.ಸಿ. ದಿನೇಶ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಕೆದಕಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಾರ್ವತಿ ಸೋಮಯ್ಯ, ಕಂಬಿಬಾಣೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಮಧುನಾಗಪ್ಪ, ಸುಂಟಿಕೊಪ್ಪ ಗ್ರಾ.ಪಂ. ಸದಸ್ಯರುಗಳಾದ ಗೀತಾ, ಮಂಜುಳ ಪ್ರಾದೇಶಿಕ ವಲಯಾಧಿಕಾರಿ ಪುರುಷೋತ್ತಮ ಇದ್ದರು. ಶಿಬಿರಾಧಿಕಾರಿ ದಿನೇಶ್ ಮರಾಠೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದ ೮ ದಿನಗಳ ಚಿತ್ರಣವನ್ನು ಅಂಕಿ ಅಂಶ ಸಹಿತವಾಗಿ ವಿವರಿಸಿದರು.

ಪೊನ್ನಮ್ಮ ಪ್ರಾರ್ಥಿಸಿ, ಮಹೇಂದ್ರ ಸ್ವಾಗತಿಸಿ, ಎಂ.ಎಸ್.ಸುನಿಲ್ ಕಾರ್ಯಕ್ರಮ ನಿರೂಪಿಸಿ, ಸುಂಟಿಕೊಪ್ಪ ವಲಯ ಮೇಲ್ವಿಚಾರಕರಾದ ಸಂತೋಷ್ ವಂದಿಸಿದರು.