ಪೆರಾಜೆ, ಫೆ. ೧: ಯಾವುದೇ ವಾದ್ಯ ಘೋಷವಿಲ್ಲ, ದಿಬ್ಬಣದ ವಾಹನಗಳ ಸಾಲುಗಳಿಲ್ಲ, ಬೆಳಗ್ಗಿನಿಂದ ಸಂಜೆಯವರೆಗೆ ಕಲ್ಯಾಣ ಮಂಟಪದಲ್ಲಿ ಮದುವೆ ಸಂದರ್ಭ ಕಂಡುಬರುವ ಜನಜಂಗುಳಿಯ ದೃಶ್ಯವಂತೂ ಇಲ್ಲವೇ ಇಲ್ಲ. ಆದರೆ ವರ ಮತ್ತು ವಧು ಪರಸ್ಪರ ಮದುವೆಯಾಗಿ ನೂತನ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.

ಸುಳ್ಯದ ಗಿರಿದರ್ಶಿನಿಯ ಮರಾಟಿ ಸಭಾಭವನದಲ್ಲಿ ಚಿಂತಕ ಗೋಪಾಲ ಪೆರಾಜೆ ಹಾಗೂ ಗೀತಾ ಗಾಯತ್ರಿ ದಂಪತಿಯ ಪುತ್ರಿ ಸುಮೇಧ ಅವರ ವಿವಾಹವು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಮಂಜುನಾಥ ಮತ್ತು ಮಹಾದೇವಿ ದಂಪತಿಯ ಪುತ್ರ ಮಹೇಶ್ ಅವರೊಂದಿಗೆ ಶನಿವಾರ ನಡೆಯಿತು.

ಬೆಳಿಗ್ಗೆ ಗಾಯಕ ಕೆ.ಆರ್. ಗೋಪಾಕೃಷ್ಣ ಅವರ ಕುವೆಂಪು ರಚಿತ ಹಾಡುಗಳ ಮೂಲಕ ಆರಂಭವಾದ ಮದುವೆ ಕಾರ್ಯಕ್ರಮದಲ್ಲಿ ಜೀತು ನಿಡ್ಲೆಯವರು ಬೋಧಿಸಿದ ಪ್ರತಿಜ್ಞೆಯನ್ನು ವಧು ವರರು ಸ್ವೀಕರಿಸಿದರು. ಬಳಿಕ ವಧು ವರರು ಪರಸ್ಪರ ಹಾರ ಬದಲಾಯಿಸಿಕೊಂಡು, ವರ ವಧುವಿಗೆ ಮಾಂಗಲ್ಯ ಕಟ್ಟುವುದರ ಮೂಲಕ ಸತಿ ಪತಿಗಳಾದರು. ಭರತ್ ಕುಕ್ಕುಜಡ್ಕ ಮಂತ್ರ ಮಾಂಗಲ್ಯದ ಕುರಿತು ಮಾತನಾಡಿದರು.

ಈ ಬಗ್ಗೆ ವಧುವಿನ ತಂದೆ ಗೋಪಾಲ್ ಪೆರಾಜೆ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಮಗನ ಮದುವೆ ಬಹಳ ಸರಳವಾಗಿ ನಡೆದಿತ್ತು. ಈಗ ಮಗಳ ಮದುವೆಯನ್ನು ಸರಳ ರೀತಿಯಲ್ಲಿ ಮಾಡಿದ್ದೇನೆ. ಮಕ್ಕಳಿಗೂ ಈ ರೀತಿಯ ಸರಳ ಮದುವೆಯ ಬಗ್ಗೆ ಒಲವಿತ್ತು. ಅದನ್ನ ನನ್ನಲ್ಲಿ ಹೇಳಿದ್ದರು. ಇಂದಿನ ಆಡಂಬರದ ಮದುವೆಯಲ್ಲಿ ತಂದೆ ತಾಯಿ ಸಾಲ ಶೂಲ ಮಾಡಿ ಹೈರಾಣಾಗುತ್ತಾರೆ. ಮದುವೆಗೆ ಮಾಡಿದ ಸಾಲ ಕಟ್ಟಲು ತುಂಬಾ ವರ್ಷ ವ್ಯಯಿಸುತ್ತಾರೆ. ಇಂತಹ ಮದುವೆ ಮುಂದಿನ ತಲೆಮಾರಿಗೆ ಮಾದರಿಯಾಗಲಿ ಎಂದರು.

- ಗಿರೀಶ್ ಪೆರಾಜೆ